ರಾಜ್ಯ ಪೊಲೀಸ್ ಮಹಿಳಾ ಕ್ರೀಡಾಳುಗಳಿಗೆ ರೈಲಿನ ಟಾಯ್ಲೆಟ್ ಬಳಿ ಮಲಗುವ ಸೌಭಾಗ್ಯ?
ಬೆಂಗಳೂರು,ಮೇ 10: ರಾಜಾಜಿನಗರ ಶಾಸಕ ಎಸ್.ಸುರೇಶ ಕುಮಾರ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ,ಚಲಿಸುತ್ತಿದ್ದ ರೈಲಿನಲ್ಲಿ ಟಾಯ್ಲೆಟ್ ಬಳಿ ಮಲಗಿಕೊಂಡಿದ್ದ,ರಾಜ್ಯ ಪೊಲೀಸ್ ಜೆರ್ಸಿಗಳಲ್ಲಿದ್ದ ಕೆಲವು ಮಹಿಳೆಯರ ಚಿತ್ರಗಳು ಮಂಗಳವಾರ ವೈರಲ್ ಆಗಿದ್ದು, ಕೋಲಾಹಲವನ್ನೇ ಸೃಷ್ಟಿಸಿವೆ.
ರಾಜ್ಯ ಪೊಲೀಸ್‌ನ ಮಹಿಳಾ ಕ್ರೀಡಾಪಟುಗಳಿಗೆ ರೈಲಿನಲ್ಲಿ ಟಾಯ್ಲೆಟ್ ಬಳಿ ಮಲಗುವ ದುರ್ದೆಸೆಯೇ ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಕುಮಾರ್, ರಾಜ್ಯ ಪೊಲೀಸ್ ಇಲಾಖೆಗೆ ಸೇರಿದ ಮಹಿಳಾ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲು ಹೇಗೆ ಪ್ರಯಾಣಿಸು ತ್ತಿದ್ದಾರೆ..ನೋಡಿ ಎಂಬ ಕಮೆಂಟ್ ಹಾಕಿದ್ದರು.
ಇಲಾಖೆಗೆ ಪದಕಗಳು ಮತ್ತು ಗೌರವ ತಂದು ಕೊಡಬಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವಲ್ಲಿ ವೈಫಲ್ಯಕ್ಕಾಗಿ ರಾಜ್ಯ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿರುವ ಕುಮಾರ್, ಈ ಚಿತ್ರಗಳು 2016,ಅಕ್ಟೋಬರ್‌ನಲ್ಲಿ ಕ್ರೀಡಾಕೂಟವೊಂದಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಪ್ರಯಾಣಿಸುತ್ತಿದ್ದ ಮಹಿಳೆಯರದಾಗಿದ್ದು, ತನ್ನ ಸ್ನೇಹಿತರೋ ರ್ವರು ತನಗೆ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.
ಆದರೆ ಈ ಘಟನೆಯ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಪೊಲೀಸ್ ಸಿಬ್ಬಂದಿಗಳು ಕ್ರೀಡಾಕೂಟಕ್ಕೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ರಾಜ್ಯದೊಳಗೆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶವಿದೆ. ಅಲ್ಲದೆ ಸಾಮಾನ್ಯವಾಗಿ ಕೋಚ್,ಕ್ಯಾಪ್ಟನ್,ಕುಕ್ ಮತ್ತು ಅಗತ್ಯ ಉಪಕರಣಗಳೊಂದಿಗೆ ಗುಂಪಾಗಿ ತೆರಳುವ ಸಿಬ್ಬಂದಿಗಳನು ಸಾಗಿಸಲು ರಾಜ್ಯ ಪೊಲೀಸ್ ಪಡೆಯು ವ್ಯವಸ್ಥೆಗಳನ್ನು ಮಾಡುತ್ತದೆ ಎಂದು ಕ್ರೀಡಾ ಪ್ರಾಧಿಕಾರದ ಉಸ್ತುವಾರಿಯೂ ಆಗಿರುವ ಎಡಿಜಿಪಿ (ಆಡಳಿತ) ಕಮಲ ಪಂತ್ ಅವರು ಸ್ಪಷ್ಟಪಡಿಸಿದ್ದಾರೆ.