×
Ad

ಮುಖ್ಯಮಂತ್ರಿಗಳೊಂದಿಗೆ ವೇಣುಗೋಪಾಲ್ ಮಾತುಕತೆ

Update: 2017-05-10 20:23 IST

 ಬೆಂಗಳೂರು, ಮೇ 10: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸಲು ನಗರಕ್ಕೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ವೇಣುಗೋಪಾಲ್ ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕಾವೇರಿಗೆ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದರು.

  ಸಭೆಯಲ್ಲಿ ಕೆ.ವೇಣುಗೋಪಾಲ್ ಅವರೊಂದಿಗೆ ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ್, ಮಧು ಯಕ್ಷಿಗೌಡ, ಮಾಣಿಕ್ಕಂ ಠಾಗೂರ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 2 ಗಂಟೆಗೂ ಹೆಚ್ಚು ಕಾಲ ಕೆ. ವೇಣುಗೋಪಾಲ್ ಮುಖ್ಯಮಂತ್ರಿಗಳ ಜೊತೆ ಮುಕ್ತವಾಗಿ ಹಲವು ವಿಚಾರಗಳನ್ನು ಚರ್ಚಿಸಿದರು.

 ಕಳೆದ ಎರಡು ದಿನಗಳಿಂದ ನಗರದಲ್ಲಿ ಮೊಕ್ಕಾಂ ಹೂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ನಿನ್ನೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರಿಗೆ ಉಪಾಹಾರ ಕೂಟದ ಆಹ್ವಾನ ನೀಡಿದ್ದರು. ಆಹ್ವಾನದ ಮೇರೆಗೆ ಮುಖ್ಯಮಂತ್ರಿ ನಿವಾಸದಲ್ಲಿ ಉಪಾಹಾರ ಕೂಟದಲ್ಲಿ ವೇಣುಗೋಪಾಲ್ ಪಾಲ್ಗೊಂಡರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಸಮಯ ಪ್ರತ್ಯೇಕ ಮಾತುಕತೆ ನಡೆಸಿದರು ಎನ್ನಲಾಗಿದೆ.

ಈ ಉಪಾಹಾರ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ನಿವಾಸಕ್ಕೆ ಶಾಸಕರು, ಪಕ್ಷದ ಮುಖಂಡರು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮುಖ್ಯಮಂತ್ರಿ ಭೇಟಿಗೆ ಆಗಮಿಸಿದ ಶಾಸಕರು ಹಾಗೂ ಮುಖಂಡರನ್ನು ಪೊಲೀಸರು ಯಾರನ್ನು ಒಳಗೆ ಬಿಡದಂತೆ ಕಟ್ಟಪ್ಪಣೆ ಬಂದಿದೆ ಎಂದು ವಾಪಾಸ್ ಕಳುಹಿಸಿದರು. ಈ ವೇಳೆ ಕೆಲ ಶಾಸಕರ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕುಸಿದು ಬಿದ್ದ ವಿಷ್ಣುನಾದ್

  ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ್ದ ಕೆ.ಸಿ.ವೇಣುಗೋಪಾಲ್ ಅವರ ಕೆಪಿಸಿಸಿ ಉಸ್ತುವಾರಿ ತಂಡದಲ್ಲಿದ್ದ ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ತಲೆ ಸುತ್ತಿ ಬಿದ್ದ ಘಟನೆ ನಡೆದಿದೆ.

ತಕ್ಷಣವೇ ಅವರನ್ನು ಕಾರಿನಲ್ಲಿ ಕುಮಾರಕೃಪಾ ಅತಿಥಿ ಗೃಹಕ್ಕೆ ಕರೆದೊಯ್ದು, ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಲಾಯಿತು. ಸ್ವಲ್ಪ ವಿಶ್ರಾಂತಿ ಪಡೆದ ನಂತರ ವಿಷ್ಣುನಾದ್ ಚೇತರಿಸಿಕೊಂಡು ಯಥಾಸ್ಥಿತಿ ಪಕ್ಷದ ಸಭೆಗಳಲ್ಲಿ ಭಾಗವಹಿಸಿದರು. ಕಳೆದ ಎರಡು ದಿನಗಳಿಂದ ಬಿಡುವಿಲ್ಲದಂತೆ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News