ಪರೀಕ್ಷಾ ಫಲಿತಾಂಶ ದಿನ: ಬದುಕನ್ನು ನಿರ್ಣಯಿಸುವ ದಿನವಾಗದಿರಲಿ..!!

Update: 2017-05-10 18:32 GMT

ಶೈಕ್ಷಣಿಕ ವರ್ಷವು ಕೊನೆಗೊಂಡು ಇನ್ನೇನು ಮುಂದಿನ ಶೈಕ್ಷಣಿಕ ಜೀವನದ ಕನಸು ಕಾಣುವ ಬಹುತೇಕ ವಿದ್ಯಾರ್ಥಿಗಳು ಒಂದೆಡೆಯಾದರೆ, ಇನ್ನೊಂದೆಡೆ ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದ ಸಾವಿರಾರು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಆದರೆ ಇಂದು ಪರೀಕ್ಷಾ ಫಲಿತಾಂಶ ದಿನವನ್ನು ಯುವ ಮನಸ್ಸುಗಳು ಬದುಕನ್ನು ನಿರ್ಣಯಿಸುವ ದಿನವೆಂಬಂತೆ ಬದಲಾಯಿಸಿಬಿಟ್ಟಿರುವುದು ನಿಜಕ್ಕೂ ದುರಂತ..!!

ಪರೀಕ್ಷಾ ಫಲಿತಾಂಶ ಇನ್ನೇನು ಹತ್ತಿರವಾಗುವ ಮುನ್ನವೇ ದಿನಪತ್ರಿಕೆಗಳಲ್ಲಿ ‘‘ಪರೀಕ್ಷಾ ಫಲಿತಾಂಶದ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ’’ ಅನ್ನುವಂತಹ ತಲೆಬರಹಗಳು ನಮಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಕಾಣಸಿಗುತ್ತದೆ. ಅದೆಷ್ಟೋ ಚಿಗುರೊಡೆಯಬೇಕಾದ ಯುವ ಮನಸ್ಸುಗಳು ತಮ್ಮ ಬದುಕನ್ನು ಅನ್ಯಾಯವಾಗಿ ಸಾಯಿಸುವಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಪರೀಕ್ಷಾ ಫಲಿತಾಂಶವು ಬದುಕನ್ನು ನಿರ್ಣಯಿಸುವ ಫಲಿತಾಂಶ ಅಲ್ಲ ಅನ್ನುವುದನ್ನು ಯುವಮನಸ್ಸುಗಳಿಗೆ ಅರ್ಥೈಸುವಂತಹ ಪ್ರಯತ್ನ ನಡೆಯಬೇಕಿದೆ. ತಾವು ಕಷ್ಟಪಟ್ಟು ಓದಿ ಬರೆದ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೂ, ಅದೇ ವಿಷಯಗಳಲ್ಲಿ ಮತ್ತೆ ಓದಿ ಬರೆಯಲು ಹಲವಾರು ಅವಕಾಶಗಳು ತೆರೆದಿರುತ್ತವೆ. ಆದರೆ ತಮ್ಮ ಅತ್ಯಮೂಲ್ಯವಾದ ಜೀವನವನ್ನು ಒಮ್ಮೆ ಸಾಯಿಸಿದರೆ, ಮತ್ತೆ ಕನಿಷ್ಠ್ಟ ಪಕ್ಷ ಚಿಂತಿಸಲೂ ಅವಕಾಶವಿರುವುದಿಲ್ಲ ಅನ್ನುವ ವಾಸ್ತವ ಸತ್ಯವನ್ನು ವಿದ್ಯಾರ್ಥಿಗಳು ಮರೆಯಬಾರದು.

ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಬದುಕಿನ ಕುರಿತು ನಿರ್ಧರಿತ ಗುರಿಯಿಲ್ಲದಿದ್ದರೂ, ತಮ್ಮ ಹೆತ್ತವರಿಗೋಸ್ಕರ ಕಲಿಯುವವರಿದ್ದಾರೆ.ಹಾಗಿರುವಾಗ ಇಂತಹ ಮಕ್ಕಳ ಮನದಲ್ಲಿ ಸಹಜವಾಗಿ ಫಲಿತಾಂಶದ ದಿನ ಒಂದು ರೀತಿಯ ಭಯ ಆವರಿಸಿರುತ್ತದೆ. ಒಂದು ವೇಳೆ ನಾನು ತೇರ್ಗಡೆಯಾಗದೆ ಹೋದರೆ ಮನೆಯಲ್ಲಿ ನನ್ನನ್ನು ಏನು ಮಾಡುವರೋ ಅನ್ನುವ ಚಿಂತೆಯಿಂದ ಕೆಲವರು ಮನೆಬಿಟ್ಟು ಹೋದರೆ, ಇನ್ನು ಕೆಲವರು ಆತ್ಮಹತ್ಯೆಯಂತಹ ನೀಚ ಕಾರ್ಯಗಳಿಗೆ ಇಳಿದು ತಮ್ಮ ಜೀವನವನ್ನೇ ಕೊನೆಗೊಳಿಸುತ್ತಾರೆ.

ಕೆಲ ಹೆತ್ತವರು ತಮ್ಮ ಮಕ್ಕಳು ತೇರ್ಗಡೆ ಹೊಂದದೆ ಹೋದರೆ ನಮ್ಮ ಪ್ರತಿಷ್ಠೆಗೆ ಎಲ್ಲಿ ತೊಡಕಾಗಬಹುದೋ ಅಂದುಕೊಂಡು ಮಕ್ಕಳನ್ನು ಪರೀಕ್ಷಾ ಸಮಯದಲ್ಲೇ ಗದರಿಸಲು ಪ್ರಾರಂಭಿಸುತ್ತಾರೆ. ಇದು ಮಕ್ಕಳ ಭವಿಷ್ಯದ ಮೇಲೆ ಮಾರಕವಾದ ಪರಿಣಾಮವನ್ನು ಬೀರುತ್ತದೆ. ತಮ್ಮ ಮಕ್ಕಳಿಗೆ ಭಯವನ್ನು ಸೃಷ್ಟಿಸಿ ಕಲಿಸುವ ಬದಲು

ಮಕ್ಕಳಿಗೆ ಪ್ರೀತಿಯಿಂದ ಅವರ ಜವಾಬ್ದಾರಿ, ಅವರ ಬದುಕಿನ ಗುರಿಯ ಬಗ್ಗೆ ತಿಳಿಸಿಕೊಡಬೇಕಾಗಿದೆ.
ನಾವು ಬೆಳೆಸಿದ ತೋಟದ ಗಿಡವೊಂದರಲ್ಲಿ ಫಸಲು ಬಾರದೆ ಹೋದರೆ ಅದನ್ನು ಕಡಿಯದೆ, ಅದಕ್ಕೆ ಇನ್ನಷ್ಟು ಗೊಬ್ಬರ, ನೀರು ಹಾಕಿ ಫಸಲು ಬರುವಂತೆ ಯಾವ ರೀತಿ ಪ್ರಯತ್ನಿಸುತ್ತೇವೆಯೋ ಅದೇ ರೀತಿ ನಮ್ಮ ಮಕ್ಕಳನ್ನೂ ಬೆಳೆಸಬೇಕಾಗಿದೆ.

ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಬುದ್ಧಿ, ನೆನಪಿನ ಶಕ್ತಿ ಇರಬೇಕಿಂದಿಲ್ಲ. ಕೆಲವರು ವಿಶಿಷ್ಟ ಬುದ್ಧಿಯಿಂದ ಗುರುತಿಸಲ್ಪಟ್ಟರೂ ಇನ್ನು ಕೆಲವರಿಗೆ ಅದೆಷ್ಟು ಓದಿದರೂ ತಲೆಗೆ ಹತ್ತಲು ಕಷ್ಟವಾದೀತು. ಹಾಗಿರುವಾಗ ಮಕ್ಕಳು ಅದೆಷ್ಟೇ ಓದಿದರೂ ಕೆಲವೊಮ್ಮೆ ಪರೀಕ್ಷೆಯ ಫಲಿತಾಂಶವು ಅವರಿಗೆ ಪೂರಕವಾಗಿ ಬರಲು ಕಷ್ಟಪಡಬೇಕಾದೀತು.
ಪೋಷಕರೇ...ನಿಮ್ಮ ಮಕ್ಕಳ ಪೈಕಿ ಯಾರಾದರು ಒಬ್ಬರು ಅನುತ್ತೀರ್ಣಗೊಂಡರೆ, ಉತ್ತೀರ್ಣಗೊಂಡವರ ಮುಂದೆ ಅವರನ್ನು ಪರಿಹಾಸ್ಯ ಮಾಡದಿರಿ. ನಿಮ್ಮ ಕೆಲವೊಂದು ಮಾತುಗಳು ಅವರ ಮಾನಸಿಕ ಸ್ಥೈರ್ಯವನ್ನೇ ಕುಸಿಯುವಂತೆ ಮಾಡೀತು. ಅವರಿಗೆ ಇನ್ನಷ್ಟು ಧೈರ್ಯವನ್ನು ತುಂಬಿ ಬದುಕಿನ ಗುರಿಯ ಬಗ್ಗೆ ಅರ್ಥೈಸಿ.

ವಿದ್ಯಾರ್ಥಿಗಳೇ... ಮುಂಬರುವ ಪರೀಕ್ಷಾ ಫಲಿತಾಂಶವು ನಿಮಗೆ ಪೂರಕವಾಗಿ ಬಾರದಿದ್ದರೆ ಧೃತಿಗೆಡದಿರಿ. ಒಮ್ಮೆ ಸೋಲಾದರೆ ಇನ್ನೂ ಹಲವಾರು ಅವಕಾಶಗಳು ನಿಮಗಾಗಿ ತೆರೆದಿರುತ್ತವೆ. ದೇಶ ಕಂಡ ಹೆಸರಾಂತ ಹಲವು ನಾಯಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಿದವರು ಎಸೆಸೆಲ್ಸಿ ಪರೀಕ್ಷೆಯನ್ನೂ ತೇರ್ಗಡೆಗೊಳ್ಳದೆ ಇರುವವರು ಅನ್ನುವ ವಾಸ್ತವ ಸತ್ಯವನ್ನು ಮರೆಯದಿರಿ. ಸಾಧನೆ ಮಾಡಲು ಸಾಧಿಸುವ ಛಲವೊಂದಿದ್ದರೆ ಸಾಕು, ಅದೇನನ್ನು ಬೇಕಾದರೂ ಸಾಧಿಸಲು ಸಾಧ್ಯವಿದೆ. 

Writer - -ಎಸ್.ಜೆ.ಅಡ್ಕ

contributor

Editor - -ಎಸ್.ಜೆ.ಅಡ್ಕ

contributor

Similar News