ರೌಡಿ ಶೀಟರ್ ಬಾಂಬ್ ನಾಗ ಬಂಧನ
ಬೆಂಗಳೂರು, ಮೇ 11: ಅಮಾನ್ಯಗೊಂಡಿರುವ ನೋಟುಗಳ ಬದಲಾವಣೆ ದಂಧೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪ ಕೇಳಿಬಂದ ಬೆನ್ನಲ್ಲೇ ತಲೆಮೆರೆಸಿಕೊಂಡಿದ್ದ ರೌಡಿ ಶೀಟರ್ ನಾಗ ಯಾನೆ ವಿ.ನಾಗರಾಜ್ ಹಾಗೂ ಆತನ ಪುತ್ರರಿಬ್ಬರನ್ನು ಬೆಂಗಳೂರು ವಿಶೇಷ ಪೊಲೀಸರ ತಂಡ ತಮಿಳುನಾಡಿನಲ್ಲಿ ಬಂಧಿಸಿದೆ.
ಗುರುವಾರ ಮಧ್ಯಾಹ್ನ 3:30ರ ಸುಮಾರಿಗೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರ್ಕಾಟ್ ಬಳಿಯ ತೋಟದ ಮನೆಯೊಂದಲ್ಲಿ ಅಡಗಿದ್ದ ನಾಗ ಹಾಗೂ ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿಯನ್ನು ಪೂರ್ವವಿಭಾಗದ ಡಿಸಿಪಿ ಅಜಯ್ ಹಿಲೋರಿ, ಎಸಿಪಿ ರವಿಕುಮಾರ್ ನೇತೃತ್ವದ 10 ಜನರ ವಿಶೇಷ ತಂಡ ಬಂಧಿಸಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಸಿಕ್ಕಿದ್ದು, ಹೇಗೆ ?: 27 ದಿನಗಳಿಂದ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ನಾಗರಾಜ್ ದಿನಕ್ಕೊಂದರಂತೆ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ತನಗೆ ಬೇಕಾದವರೊಂದಿಗೆ ಅಜ್ಞ್ಞಾತ ಸ್ಥಳದಿಂದಲೇ ಕುಳಿತುಕೊಂಡು ವ್ಯವಹಾರ ನಡೆಸುತ್ತಿದ್ದ. ನಾಗ ತನ್ನ ವಕೀಲ ಶ್ರೀರಾಮ್‌ರೆಡ್ಡಿ ಮತ್ತು ಪತ್ನಿಯೊಂದಿಗೆ ಮಾತನಾಡಲು ನಡೆಸಲು ಒಂದು ಪ್ರತ್ಯೇಕ ಸಿಮ್‌ಕಾರ್ಡ್‌ಗಳನ್ನು ಬಳಸುತ್ತಿರುವ ಬಗ್ಗೆ ನಾಗನ ಸಹಚರರು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಕೀಲ ಶ್ರೀರಾಮ್‌ರೆಡ್ಡಿ ಹಾಗೂ ನಾಗನ ಪತ್ನಿಯ ಮೊಬೈಲ್‌ಗೆ ಆತ ಮಾಡಿರುವ ಫೋನ್ ಕರೆಗಳ ಟವರ್ ಲೊಕೇಶನ್ ಪರಿಶೀಲಿಸಿದಾಗ ಆತ ತಮಿಳುನಾಡಿನಲ್ಲಿರುವ ಸುಳಿವು ದೊರೆತಿತ್ತು.ಕೂಡಲೆ ತಮಿಳುನಾಡಿಗೆ ತೆರಳಿದ ಪೊಲೀಸರ ತಂಡ ವೆಲ್ಲೂರು ಜಿಲ್ಲೆಯ ಅರ್ಕಾಟ್‌ನಲ್ಲಿರುವ ತೋಟದ ಮನೆಯಲ್ಲಿ ನಾಗರಾಜ್ ವಾಸವಿರುವುದನ್ನು ಖಚಿತಪಡಿಸಿಕೊಂಡು ಬಂಧಿಸಲು ಮುಂದಾದಾಗ ಆತ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.
ಬಳಿಕ 5ಕಿ.ಮೀ ಕಾರಿನಲ್ಲಿ ಆತನನ್ನು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿದ ಪೊಲೀಸರು ಇಬ್ಬರು ಪುತ್ರರ ಜೊತೆ ನಾಗನನ್ನು ಸೆರೆ ಹಿಡಿದಿದ್ದಾರೆ.
ನಾಗರಾಜ್ ಜೊತೆಗೆ ಆತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿ ಸಹ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ ಆತನ ಇಬ್ಬರು ಮಕ್ಕಳ ಮೇಲೂ ಲವಾರು ಪ್ರಕರಣಗಳು ದಾಖಲಾಗಿವೆ.
ದೇವಸ್ಥಾನ ಸುತ್ತುತಿದ್ದ: 27 ದಿನವೂ ರೌಡಿಶೀಟರ್ ದೇವಸ್ಥಾನ ಸುತ್ತಿದ್ದಾನೆ. ಗುರುವಾರವೂ ವೆಲ್ಲೂರಿನಲ್ಲಿರುವ ದೇವಸ್ಥಾನಕ್ಕೆ ಹೋಗಿ ಬಂದಿರುವುದಾಗಿ ತಿಳಿದುಬಂದಿದ್ದು, ಕೆಲದಿನ ದೇವಸ್ಥಾನದಲ್ಲಿಯೇ ಮಲಗುತ್ತಿದ್ದ ಎನ್ನಲಾಗಿದೆ.
ಪೊಲೀಸರ ವಿರುದ್ಧವೇ ದೂರು: ಗುರುವಾರ ಮಧ್ಯಾಹ್ನ 3:30ರ ಸುಮಾರಿಗೆ ಬೆಂಗಳೂರಿಗೆ ಹೆಣ್ಣೂರು ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡ ರೌಡಿಶೀಟರ್ ನಾಗನನ್ನು ಬಂಧಿಸಿದಾಗ, ಆತನ ಸಹಚರರು, ನಾಗನನ್ನು ಅಪಹರಣ ಮಾಡುತ್ತಿದ್ದಾರೆ ಎಂದು ವೆಲ್ಲೂರು ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಕೆಲ ಕಾಲ ಗೊಂದಲ ಉಂಟಾಗಿದ್ದು, ತದನಂತರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಮಿಳುನಾಡು ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.
ನಾಗನ ಹಿನ್ನೆಲೆ: ನಗರದ ಶ್ರೀರಾಂಪುರದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ರೌಡಿಶೀಟರ್ ನಾಗ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಪೊಲೀಸರು ಕೋಟ್ಯಂತರ ರೂಪಾಯಿ 500, 1000 ರೂ. ಮುಖಬೆಲೆಯ ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದರು. ನಾಗನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರೂ ಕೂಡಾ ಸುಮಾರು 27 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ.
ರಹಸ್ಯ ಸ್ಥಳದಿಂದ ನಾಗ ತನ್ನ ವಕೀಲರ ಮೂಲಕ ಮಾಧ್ಯಮಗಳಿಗೆ ವಿಡಿಯೋ ರವಾನಿಸಿ, ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕಾರಣಿಗಳು, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದ. ಅಲ್ಲದೇ ತಾನು ಶರಣಾಗಲು ಷರತ್ತು ವಿಧಿಸಿದ್ದ. ಹೈಕೋರ್ಟ್ ಕೂಡಾ ಬಾಂಬ್ ನಾಗನಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ನಂತರ 2ನೆ ವಿಡಿಯೋ ಬಿಡುಗಡೆ ಮಾಡಿ, ಗೃಹ ಸಚಿವರಾದ ಪರಮೇಶ್ವರ್ ಅವರು ಒಪ್ಪಿದರೆ ತಾನು ಹತ್ತು ನಿಮಿಷದಲ್ಲೇ ಶರಣಾಗುವೆ ಎಂದು ಹೇಳಿದ್ದ.
ಪೊಲೀಸರಿಗೂ ಷರತ್ತು ವಿಧಿಸಿದ್ದ ಹಾಗೂ ಆತನ ಇಬ್ಬರು ಪುತ್ರರನ್ನು ಬೆಂಗಳೂರು ಪೊಲೀಸರ ವಿಶೇಷ ತಂಡ ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಸಹಾಯ ಮಾಡಿದವರ ವಿರುದ್ಧ ಕಾನೂನು ಕ್ರಮ
ರೌಡಿಶೀಟರ್ ವಿ.ನಾಗರಾಜ್ 27 ದಿನಗಳ ತಲೆಮರೆಸಿಕೊಂಡಿದ್ದ ವೇಳೆ ಆತನಿಗೆ ಸಹಾಯ ಮಾಡಿದ ವ್ಯಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಇದುವರೆಗೂ 10ಕ್ಕೂ ಹೆಚ್ಚು ಜನ ನಾಗನ ಸಹಚರರನ್ನು ವಶಕ್ಕೆ ಪಡಯಲಾಗಿದೆ.