ಚಿದಾನಂದಮೂರ್ತಿ ಹಿಂದೂ ಧರ್ಮಾಂದ ಚಿಂತಕ: ಎಚ್.ಎಸ್.ದೊರೆಸ್ವಾಮಿ

Update: 2017-05-11 14:26 GMT

ಬೆಂಗಳೂರು, ಮೇ 11: ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಬಹುತೇಕ ವಿಷಯಗಳಲ್ಲಿ ಹಿಂದೂ ಧರ್ಮಾಂದರಂತೆ ವರ್ತಿಸುತ್ತಾರೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಭಿಪ್ರಾಯಿಸಿದ್ದಾರೆ.

ಗುರುವಾರ ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ನಾಡೋಜ ಡಾ.ಎಂ.ಚಿದಾನಂದ ಮೂರ್ತಿ-87ಅಭಿನಂದನೆ’ ಹಾಗೂ ಸತ್ಯವಾರ್ತೆ ಕನ್ನಡ ಮಾಸ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ತಮ್ಮ ಸಂಶೋಧನೆಯ ಲಿಂಗಾಯಿತ ಧರ್ಮ ಹಿಂದೂ ಧರ್ಮದ ಭಾಗ, ದೇವರ ದಾಸಿಮಯ್ಯ ವಚನಕಾರನಲ್ಲ ಎಂಬ ವಿಷಯಗಳು ವಿವಾದಕ್ಕೀಡಾಗಿವೆ. ಹೀಗೆ ಅನೇಕ ವಿಷಯಗಳಲ್ಲಿ ಹಿಂದೂ ಧರ್ಮಾಂದರ ರೀತಿಯಲ್ಲಿ ಚಿಂತಿಸುತ್ತಾರೆ ಎಂದು ಅವರು ತಿಳಿಸಿದರು.

ಡಾ.ಎಂ.ಚಿದಾನಂದಮೂರ್ತಿ ಕೇವಲ ಸಂಶೋಧಕರು ಮಾತ್ರವಲ್ಲ. ನಾಡು, ನುಡಿಗೆ ಸಂಕಷ್ಟ ಬಂದಾಗಲೆಲ್ಲ ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವಾಗಿ ರಾಜ್ಯ ಸರಕಾರ ಕನ್ನಡಪರವಾಗಿ ಅನೇಕ ಯೋಜನೆಗಳನ್ನು ರೂಪಿಸಲು ಸಾಧ್ಯವಾಯಿತು ಎಂದು ಎಚ್.ಎಸ್.ದೊರೆಸ್ವಾಮಿ ಅಭಿಮಾನ ವ್ಯಕ್ತಪಡಿಸಿದರು.

ಹಿರಿಯ ಸಿನಿಮಾ ನಟ ಎಸ್.ಶಿವರಾಮ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದ ಪ್ರಾರಂಭದಲ್ಲಿ ರೈತರು ಹಾಗೂ ಕಾರ್ಮಿಕರ ಅಭಿವೃದ್ಧಿ ಹಾಗೂ ಜಾತ್ಯತೀತ ವೌಲ್ಯಗಳಿಗೆ ಮೊದಲ ಆದ್ಯತೆ ಕೊಡುವುದಾಗಿತ್ತು. ಆದರೆ, ಇಷ್ಟು ವರ್ಷಗಳು ಕಳೆದರು ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ವ್ಯಕ್ತಿಗಳು ಶಿವಶರಣರ ವಚನಗಳನ್ನು ಬಾಯಿಪಾಠ ಮಾಡಿಕೊಂಡು ವೇದಿಕೆಗಳಲ್ಲಿ ಹೇಳುವುದನ್ನೇ ದೊಡ್ಡ ಸಾಧನೆಯೆಂದು ಭಾವಿಸುತ್ತಾರೆಯೇ ಹೊರತು ವಚನಗಳಲ್ಲಿರುವ ನಿಜವಾದ ಆಶಯಗಳನ್ನು ಅನುಷ್ಠಾನಕ್ಕೆ ತರಲು ಯಾವುದೇ ಕಾರ್ಯಕ್ರಮಗಳನ್ನು ಯೋಜಿಸಿಲ್ಲ. ಇಂತಹ ಜನಪ್ರತಿನಿಧಿಗಳಿಂದ ರಾಜ್ಯ ದುಸ್ಥಿತಿಯತ್ತ ವಾಲುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಮಾತನಾಡಿ, ಕನ್ನಡ ಸಂಶೋಧನ ಕ್ಷೇತ್ರಕ್ಕೆ ಡಾ.ಎಂ.ಚಿದಾನಂದಮೂರ್ತಿ ಕೊಟ್ಟಿರುವ ಸಾಧನೆ ಅವಿಸ್ಮರಣೀಯ. ಅವರ ಸಂಶೋಧನಾ ಬರಹಗಳ ಆಧಾರದ ಮೇಲೆ ನಾಡು, ನುಡಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಬಗೆ ಹರಿದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಸೇರಿದಂತೆ ನಾಡಿಗೆ ಅಪಾರ ಕಾಣಿಕೆ ನೀಡಿರುವ ಹಿರಿಯ ಸಾಧಕರು ತಮ್ಮ ಆತ್ಮ ಚರಿತ್ರೆಗಳನ್ನು ಬರೆಯಬೇಕು. ಆ ಮೂಲಕ ಯುವ ಜನತೆಗೆ ನಾಡು, ನುಡಿ ಎದುರಿಸಿದ ಸಮಸ್ಯೆಗಳು, ಆ ಸಮಸ್ಯೆಗಳ ನಿವಾರಣೆಗಾಗಿ ಕೈಗೊಂಡ ಹೋರಾಟಗಳ ಕುರಿತು ತಿಳಿದುಕೊಳ್ಳಬಹುದು. ಆ ಮೂಲಕ ಭವಿಷ್ಯದಲ್ಲಿ ನಾಡನ್ನು ಹೇಗೆ ಕೊಂಡೊಯ್ಯಬೇಕೆಂಬ ಅರಿವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿಗೆ 87ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿನಂದಿಸಲಾಯಿತು. ಇವರೊಂದಿಗೆ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು. ಡಾ.ಚಿದಾನಂದ ಮೂರ್ತಿ ಕುರಿತು ಹಂಪಿ ವಿವಿಯ ಪ್ರಾಧ್ಯಾಪಕ ಡಾ.ಎಸ್.ಎಸ್.ಅಂಗಡಿ ಅಭಿನಂದನಾ ನುಡಿಗಳನ್ನಾಡಿದರು. ಈ ವೇಳೆ ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಾ.ಎ.ಎಚ್.ಬಸವರಾಜು ಉಪಸ್ಥಿತರಿದ್ದರು.

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಪ್ರತಿಪಾದಿಸುವ ಅನೇಕ ವಿಷಯಗಳನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ಆದರೆ, ಸಂಶೋಧನೆ ಬಗೆಗಿರುವ ಅವರ ಬದ್ಧತೆ, ಕಾಳಜಿ ಎಲ್ಲರಿಗೂ ಸ್ಫೂರ್ತಿದಾಯಕ.
-ಡಾ.ನಲ್ಲೂರು ಪ್ರಸಾದ್, ಮಾಜಿ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News