ಚಿನ್ನ ಪಡೆದು ನಕಲಿ ನೋಟು ನೀಡಿ ವಂಚಿಸಿದ ಪ್ರಕರಣ: ಮೂವರ ಬಂಧನ

Update: 2017-05-11 15:03 GMT

ಬೆಂಗಳೂರು, ಮೇ 11: ನಕಲಿ ನೋಟುಗಳನ್ನು ನೀಡಿ ಒಂದು ಕೆಜಿ ಚಿನ್ನಾಭರಣ ಪಡೆದುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣಾ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಕೂಟಗಲ್ ಇಂಡಸ್ಟ್ರಿಯಲ್ ಏರಿಯಾದ ವಿನೋದ್(45), ದಟ್ಟಗಳ್ಳಿ ನಿವಾಸಿ ಹೇಮಂತ್(33), ನಿವೇದಿತ ಲೇಔಟ್‌ನ ಹರೀಶ್‌ಕುಮಾರ್(31) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಹಲಸೂರು ಗೇಟ್ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಮಾಲಕ ದಿನೇಶ್‌ಕುಮಾರ್ ಎಂಬುವರಿಗೆ ಎ.24ರಂದು ಜುಗರಾಜ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ನಾನು ಚಿಕ್ಕಮಗಳೂರಿನಿಂದ ಮಾತನಾಡುತ್ತಿದ್ದು, ನನ್ನ ಮಗಳ ಮದುವೆ ನಿಮಿತ್ತ ನನಗೆ ಒಂದು ಕೆಜಿ ಚಿನ್ನ ಬೇಕಾಗಿದೆ ಎಂದು ತಿಳಿಸಿ ಬಳಿಕ ಅದೇ ವ್ಯಕ್ತಿ ಮತ್ತೆ ಕರೆ ಮಾಡಿ ನಾನು ಮದುವೆ ಕೆಲಸದಲ್ಲಿ ನಿರತನಾಗಿರುವುದರಿಂದ ನಾನು ಬರಲು ಸಾಧ್ಯವಾಗುವುದಿಲ್ಲ. ನನ್ನ ಮ್ಯಾನೇಜರ್‌ಗೆ ಹಣ ಕೊಟ್ಟು ಕಳುಹಿಸುತ್ತೇನೆ. ನೀವು ಅವನೊಂದಿಗೆ ಚಿನ್ನ ಕೊಟ್ಟು ಹಣ ಪಡೆಯಿರಿ ಎಂದು ಹೇಳಿದ್ದಾನೆ. ಅಂದು ರಾತ್ರಿ 9 ಗಂಟೆಗೆ ಮತ್ತೆ ಅದೇ ವ್ಯಕ್ತಿ ಕರೆ ಮಾಡಿ ನನ್ನ ಮ್ಯಾನೇಜರ್ ಶಿಕ್ಷಕರ ಸದನದ ಬಳಿ ಕಾರಿನಲ್ಲಿ ಬಂದಿದ್ದು, ಕಾರ್ ನಂಬರ್ ನೀಡಿ ನೀವು ಕೂಡಲೇ ಚಿನ್ನ ತೆಗೆದುಕೊಂಡು ಆತನಿಗೆ ನೀಡಿ ಹಣ ಪಡೆಯುವಂತೆ ವಂಚಕ ಹೇಳಿದ್ದನು.
 
ಇದನ್ನು ನಂಬಿದ ಚಿನ್ನದ ವ್ಯಾಪಾರಿ ದಿನೇಶ್‌ಕುಮಾರ್ 1 ಕೆಜಿ ಚಿನ್ನ ತೆಗೆದುಕೊಂಡು ಆತ ಹೇಳಿದ ಸ್ಥಳಕ್ಕೆ ತೆರಳಿ ಅಲ್ಲಿ ಕಾರಿನಲ್ಲಿ ಕಾಯುತ್ತಿದ್ದ ವ್ಯಕ್ತಿಗೆ ಚಿನ್ನ ನೀಡಿ ಹಣವನ್ನು ಪಡೆದು ತನ್ನ ಅಂಗಡಿಗೆ ವಾಪಸಾಗಿ ಪರಿಶೀಲಿಸಿದಾಗ ಆತ ನೀಡಿದ ನೋಟುಗಳು ನಕಲಿ ಎಂಬುದು ತಿಳಿದುಬಂದಿತ್ತು. ಇದರಿಂದ ಆತಂಕಕ್ಕೊಳಗಾದ ದಿನೇಶ್‌ಕುಮಾರ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದೂರವಾಣಿ ಕರೆ ಆಧರಿಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಅವುಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ವಂಚನೆ ಮಾಡಿರುವುದು ಮೈಸೂರಿನವರು ಎಂದು ಪತ್ತೆ ಹಚ್ಚಿದ್ದರು. ಮೈಸೂರಿಗೆ ತೆರಳಿ ಆರೋಪಿಗಳನ್ನು ಬಂಧಿಸಿ ಚಿನ್ನದ ವ್ಯಾಪಾರಿಯಿಂದ ಪಡೆದುಕೊಂಡಿದ್ದ 32 ಲಕ್ಷ ರೂ. ಬೆಲೆಬಾಳುವ 1 ಕೆಜಿ ತೂಕದ ಚಿನ್ನದ ಗಟ್ಟಿ, ನಕಲಿ ನೋಟುಗಳನ್ನು ತಯಾರು ಮಾಡುವ ಕಲರ್ ಪ್ರಿಂಟರ್, ಕಂಪ್ಯೂಟರ್ ಮತ್ತು ಸ್ಕಾನಿಂಗ್ ಮೆಷಿನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ನೋಟು ಮತ್ತು ಚೆಕ್‌ಗಳನ್ನು ನಕಲಿ ಮಾಡುವ ಚಾಳಿ ಹೊಂದಿದವರಾಗಿದ್ದು ಹಾಗೂ ಮೈಸೂರು, ಚಾಮರಾಜನಗರ, ಬೆಂಗಳೂರಿನ ಎಸ್‌ಜೆ ಪಾರ್ಕ್ ಠಾಣೆಗಳಲ್ಲಿ ಇನ್ಷುರೆನ್ಸ್ ಬಾಂಡ್‌ಗಳನ್ನು ನಕಲಿ ಮಾಡುವ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News