ಲೈಂಗಿಕ ಕಿರುಕುಳ: ಆರೋಪಿ ಸೆರೆ

Update: 2017-05-11 15:18 GMT

ಬೆಂಗಳೂರು, ಮೇ 11: ನಗರದಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಚಲಿಸುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ನೊಬ್ಬನನ್ನು ಬಂಧಿಸಲಾಗಿದ್ದು, ಪಿಂಕ್ ಹೊಯ್ಸಳ ಪತ್ತೆ ಹಚ್ಚಿದ ಮೊದಲ ಪ್ರಕರಣ ಇದಾಗಿದೆ.

ಬನಶಂಕರಿಯ ಮಧುಸೂದನ್‌ರಾವ್ (47) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಂದು ತಿಳಿದುಬಂದಿದೆ.

ಪ್ರಕರಣ ವಿವರ: ಇಬ್ಲೂರು ವರ್ತುಲ ರಸ್ತೆಯಲ್ಲಿ ಬುಧವಾರ ರಾತ್ರಿ 11ರ ವೇಳೆಗೆ ಬಿಎಂಟಿಸಿ ವೋಲ್ವೋ ಬಸ್‌ನ ಹಿಂಬದಿ ಸೀಟ್‌ನಲ್ಲಿ ಕುಳಿತ ಆರೋಪಿ ಮುಂದಿನ ಸೀಟಿನಲ್ಲಿ ಕುಳಿತಿದ್ದ ಸುಮಾರು 29 ವರ್ಷ ವಯಸ್ಸಿನ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದು, ಮಹಿಳೆ ಮೊಬೈಲ್ ಫೋನ್‌ನ ಆ್ಯಪ್ ಬಳಸಿ ಇಂಟರ್‌ನೆಟ್‌ನಲ್ಲಿ ಬೆಳಂದೂರು ಪೊಲೀಸ್ ಇನ್ಸ್‌ಪೆಕ್ಟರ್ ನಂಬರ್ ಪಡೆದು ಕರೆ ಮಾಡಿ ದೂರು ನೀಡಿದ್ದರು.

ತಕ್ಷಣ ಪಿಂಕ್ ಹೊಯ್ಸಳ ವಾಹನವನ್ನು ಅಲರ್ಟ್ ಮಾಡಿದ ಇನ್ಸ್‌ಪೆಕ್ಟರ್ ವಿಕ್ಟರ್ ಅಲ್ಲಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಮಹಿಳೆಯೊಂದಿಗೆ  ಸಂಪರ್ಕ ಸಾಧಿಸಿದ ಪೊಲೀಸರು ಬಸ್ ಸಾಗುವ ಮಾರ್ಗ ಪತ್ತೆ ಹಚ್ಚಿ  ಬಸ್ ಅನ್ನು ತಡೆದಿದ್ದಾರೆ.

ಬಸ್‌ನಲ್ಲಿದ್ದ ಮಹಿಳೆ ಆರೋಪಿಯ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಆರೋಪಿ ಮಧುಸೂದನ್‌ನನ್ನು ಬಂಧಿಸಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ಥ ಮಹಿಳೆಯೂ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಪಿಂಕ್ ಹೊಯ್ಸಳ ಕಾರ್ಯಾಚರಣೆ ಆರಂಭಿಸಿದ ನಂತರ ಪತ್ತೆಹಚ್ಚಿದ ಮೊದಲ ಪ್ರಕರಣ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News