ಕಿರುಹೊತ್ತಿಗೆ ಬಿಡುಗಡೆಗೂ ಈಶ್ವರಪ್ಪಗೆ ಆಹ್ವಾನವಿಲ್ಲ
ಬೆಂಗಳೂರು, ಮೇ 11: ಬಿಜೆಪಿ ಹೊರತಂದಿರುವ ರಾಜ್ಯ ಸರಕಾರದ ನಾಲ್ಕು ವರ್ಷಗಳ ವೈಫಲ್ಯ ಕುರಿತ 64 ಪುಟಗಳ ಕಿರುಹೊತ್ತಿಗೆ ಬಿಡುಗಡೆಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆಗೆ ಬಿ.ಎಸ್.ಯಡಿಯೂರಪ್ಪ ಮೌನವಾಗಿ ಬಿಟ್ಟರು.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಉಪನಾಯಕ ಆರ್.ಅಶೋಕ್ ಸೇರಿ ಪ್ರಮುಖ ಮುಖಂಡರು ರಾಜ್ಯ ಸರಕಾರದ ನಾಲ್ಕು ವರ್ಷಗಳ ವೈಫಲ್ಯಗಳ ಕುರಿತು 64 ಪುಟಗಳ ಚಾರ್ಜ್‌ಶೀಟ್‌ನ್ನು ಬಿಡುಗಡೆಗೊಳಿಸಿದರು. ಆದರೆ, ಕೆ.ಎಸ್.ಈಶ್ವರಪ್ಪ ಮಾತ್ರ ಇರಲಿಲ್ಲ.
ಈ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರಕರ್ತರು ಎಲ್ಲಿ ಈಶ್ವರಪ್ಪ, ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದಾಗ, ಯಾವುದೇ ಉತ್ತರ ನೀಡದೆ, ಒಂದೆರಡು ನಿಮಿಷ ಮೌನವಾಗಿದ್ದರು. ಬಳಿಕವೂ ಸಹ ಉತ್ತರಿಸಲು ಮುಂದಾಗಲಿಲ್ಲ. ಈ ಪ್ರಶ್ನೆ ನನಗೆ ಕೇಳಲೇ ಇಲ್ಲ ಎಂಬ ರೀತಿ ಸುಮ್ಮನಿದ್ದರು.
ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ಮೂರು ವರ್ಷಗಳಿಂದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಿ, ಕಿರುಹೊತ್ತಿಗೆ ಹೊರತರುತ್ತಿದೆ. ಅಲ್ಲದೆ, ಈ ಕಿರುಹೊತ್ತಿಗೆ ಬಿಡುಗಡೆ ವೇಳೆ ಮೊದಲಿನಿಂದಲೂ ಈಶ್ವರಪ್ಪ ಅವರನ್ನು ಆಹ್ವಾನಿಸಿಲ್ಲ. ಈ ಬಾರಿಯೂ ಅಷ್ಟೇ ಆಹ್ವಾನಿಸಿಲ್ಲ ಎಂದು ಉತ್ತರಿಸಿದರು.
ಈಶ್ವರಪ್ಪ ಚಿತ್ರವಿಲ್ಲ?: ರಾಜ್ಯ ಸರಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಹೊರತಂದಿರುವ 64 ಪುಟಗಳ ಕಿರುಹೊತ್ತಿಗೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಚಿತ್ರ ಪುಸ್ತಕದ ಒಳಗಡೆ ಬಿಟ್ಟರೆ ಬೇರೆ ಎಲ್ಲೂ ಕಾಣುತ್ತಿಲ್ಲ. ಆದರೆ, ಬಿ.ಎಸ್.ಯೂಡಿಯೂರಪ್ಪ, ಜಗದೀಶ್‌ಶೆಟ್ಟರ್ ಅವರ ಚಿತ್ರ ಪುಸ್ತಕದೆಲ್ಲೆಡೆ ಇವೆ ಎಂದು ತಿಳಿದುಬಂದಿದೆ.