ಫುಟ್‌ಪಾತ್ ಸಮಸ್ಯೆಗೆ ಕೊನೆ ಎಂದು?

Update: 2017-05-11 18:57 GMT

 ಮಾನ್ಯರೆ,

ಮಂಗಳೂರು ನಗರದ ಹೆಚ್ಚಿನ ಪ್ರಮುಖ ರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ. ಆದರೆ ಇವುಗಳಲ್ಲಿ ಕೆಲವು ರಸ್ತೆಗಳ ಇಕ್ಕೆಲಗಳಲ್ಲಿ ಫುಟ್‌ಪಾತ್ ಇನ್ನೂ ನಿರ್ಮಾಣವಾಗದಿರುವುದರಿಂದಾಗಿ ಪಾದಚಾರಿಗಳ ಸಮಸ್ಯೆ ಹೇಳತೀರದು. ಕೆಲವು ರಸ್ತೆಗಳಲ್ಲಿ ಪುಟ್‌ಪಾತ್‌ಗೆ ಜಾಗ ಬಿಟ್ಟಿದ್ದರೂ ಕಾಂಕ್ರಿಟೀಕರಣವಾಗಿ ವರ್ಷಗಳು ಕಳೆದರೂ ಫುಟ್‌ಪಾತ್ ವ್ಯವಸ್ಥೆ ಇನ್ನೂ ಆಗಿಲ್ಲ.

ಪ್ರತೀ ವರ್ಷ ನಗರ ಪಾಲಿಕೆಯ ಬಜೆಟ್‌ನಲ್ಲಿ ಪುಟ್‌ಪಾತ್ ನಿರ್ಮಿಸುವುದರ ಬಗ್ಗೆ ಪ್ರಸ್ತಾಪವಾಗುತ್ತಿದ್ದರೂ ಇನ್ನೂ ಹಲವಾರು ರಸ್ತೆಗಳ ಫುಟ್‌ಪಾತ್‌ಗಳ ಕಾಮಗಾರಿ ಆರಂಭವಾಗುವ ಲಕ್ಷಣವೇ ಕಾಣುತ್ತಿಲ್ಲ.

ಇನ್ನು ಹಲವೆಡೆ (ಬಲ್ಮಠ ಇತ್ಯಾದಿ) ನಿರ್ಮಿಸಿದ ಫುಟ್‌ಪಾತ್‌ಗಳನ್ನೂ ಪೈಪ್‌ಲೈನ್ ಕಾಮಗಾರಿಗಳಿಗಾಗಿ ಒಡೆದು ಹಾಕಲಾಗುತ್ತಿದ್ದು, ಇಂಟರ್‌ಲಾಕ್‌ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ. ಕೆಲವೆಡೆ ಫುಟ್‌ಪಾತ್‌ಗಳಿದ್ದರೂ ಕೆಲವು ವ್ಯಾಪಾರಿಗಳು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕಾಗಿದೆ. ಇಂತಹ ಫುಟ್‌ಪಾತ್ ಅವ್ಯವಸ್ಥೆಯಿಂದಾಗಿ ನಗರದಲ್ಲಿ ಪಾದಚಾರಿಗಳು ಸಂಚರಿಸುವುದೇ ಅಪಾಯಕಾರಿಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ನಗರದ ಈ ಫುಟ್‌ಪಾತ್ ಸಮಸ್ಯೆಯನ್ನು ಅರಿಯುವ ಪ್ರಯತ್ನ ಮಾಡಿಯಾರೇ?
   

Writer - ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Editor - ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Similar News