ಪಾಕ್ ಉಗ್ರರಿಂದ ಭಾರತ, ಅಫ್ಘಾನಿಸ್ತಾನದ ಮೇಲೆ ದಾಳಿ ಸಂಚು

Update: 2017-05-12 04:57 GMT

ವಾಷಿಂಗ್ಟನ್, ಮೇ 12: ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ದಾಳಿ ನಡೆಸಲು ಸಂಚು ಹೂಡುತ್ತಿವೆ ಎಂಬ ಮಾಹಿತಿಯನ್ನು ಅಮೆರಿಕದ ನ್ಯಾಷನಲ್ ಇಂಟಲಿಜನ್ಸ್ ನಿರ್ದೇಶಕ ಸ್ಪೈ ಮಾಸ್ಟರ್ ಡೇನಿಯಲ್ ಕೋಟ್ಸ್ ಗುಪ್ತಚರಕ್ಕೆ ಸಂಬಂಧಿಸಿದ ಸೆನೆಟ್ ಸೆಲೆಕ್ಟ್ ಕಮಿಟಿಯ ಸದಸ್ಯರಿಗೆ ವಿಶ್ವದಾದ್ಯಂತ ಇರುವ ಉಗ್ರ ಬೆದರಿಕೆಗಳ ಸಂಬಂಧದ ಸಭೆಯೊಂದರಲ್ಲಿ ತಿಳಿಸಿದ್ದಾರೆ.

‘‘ಪಾಕಿಸ್ತಾನದ ಸರಕಾರ ತನ್ನ ದೇಶದಲ್ಲಿರುವ ತೀವ್ರವಾದಿಗಳು ಹಾಗೂ ಉಗ್ರಗಾಮಿಗಳನ್ನು ಹದ್ದುಬಸ್ತಿನಲ್ಲಿಡಲು ವಿಫಲವಾಗಿವೆ. ಈ ಪ್ರದೇಶದಲ್ಲಿ ಅಮೆರಿಕಕ್ಕೆ ತನ್ನ ಆಸಕ್ತಿಗಳನ್ನು ಮುಂದುವರಿಸಿಕೊಂಡು ಹೋಗುವ ಪ್ರಕ್ರಿಯೆಯಲ್ಲಿ ಬೆದರಿಕೆ ಎದುರಿಸಬೇಕಾಗುತ್ತದೆ. ಉಗ್ರ ಸಂಘಟನೆಗಳು ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ದಾಳಿ ನಡೆಸುವ ಸಂಚು ಹೂಡುವುದನ್ನು ಮುಂದುವರಿಸುತ್ತಲೇ ಇವೆ’’ ಎಂದು ಅವರು ಹೇಳಿದ್ದಾರೆ.

‘‘ಇತರ ರಾಷ್ಟ್ರಗಳು ತನ್ನನ್ನು ದೂರವಿರಿಸಿರುವುದರಿಂದ ಆತಂಕಕ್ಕೀಡಾಗಿರುವ ಪಾಕಿಸ್ತಾನ ಇದೇ ಕಾರಣದಿಂದಾಗಿ ಚೀನಾದತ್ತ ಮುಖ ಮಾಡಬಹುದು’’ ಎಂದೂ ಡೇನಿಯಲ್ ಸಮಿತಿಯೆದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಉನ್ನತ ಗುಪ್ತಚರ ಅಧಿಕಾರಿಗಳ ಪ್ರಕಾರ ಅಫ್ಘಾನಿಸ್ತಾನದಲ್ಲಿನ ರಾಜಕೀಯ ಹಾಗೂ ಭದ್ರತಾ ಸನ್ನಿವೇಶ 2019ರಲ್ಲಿ ಮತ್ತುಷ್ಟು ಹದಗೆಡಬಹುದು ಹಾಗೂ ಈ ನಿಟ್ಟಿನಲ್ಲಿ ಆ ದೇಶಕ್ಕೆ ಅಮೆರಿಕದಿಂದ ಮಿಲಿಟರಿ ನೆರವು ಸ್ವಲ್ಪ ಮಟ್ಟಿಗೆ ಹೆಚ್ಚೇ ದೊರೆಯಬಹುದು ಎಂದು ಡೇನಿಯಲ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News