ಅಕ್ರಮವಾಗಿ ಮಸೀದಿಗಳ ಮಾಹಿತಿ ಸಂಗ್ರಹಿಸುತ್ತಿರುವ ಸಂಘಪರಿವಾರ
ಬೆಂಗಳೂರು, ಮೇ 12: ಹಿಂದೂ ಜಾಗೃತಿ ಸಮಿತಿ ಸೇರಿದಂತೆ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರು ರಾಜ್ಯಾದ್ಯಂತ ಮಸೀದಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಲು ಮುಂದಾಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಮಸೀದಿಗಳ ಕಟ್ಟಡ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪರವಾನಿಗೆ ಪಡೆಯಲಾಗಿದೆಯೇ ಎಂಬ ಮಾಹಿತಿಯನ್ನು ಸಂಘಪರಿವಾರದ ಕಾರ್ಯಕರ್ತರು ಕೇಳುತ್ತಿದ್ದಾರೆ. ಅಲ್ಲದೆ, ಕೆಲವೆಡೆ ಪೊಲೀಸರು ಮಸೀದಿಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಮಾಹಿತಿಯನ್ನು ಕೋರುತ್ತಿದ್ದಾರೆ ಎನ್ನುವ ಎಂಬ ಆರೋಪಗಳು ಕೇಳಿಬರುತ್ತಿವೆ.
ಪೊಲೀಸರು ಹಾಗೂ ಸಂಘಪರಿವಾರ ಕಾರ್ಯಕರ್ತರಿಗೆ ಸರಕಾರದಿಂದಾಗಲೀ ಅಥವಾ ಯಾವುದೇ ಇಲಾಖೆಯ ಮುಖ್ಯಸ್ಥರಿಂದಾಗಲೀ ಈ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆಯೇ ಎಂಬುದರ ಕುರಿತು ಪರಿಶೀಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸರಕಾರದ ಕಾರ್ಯದರ್ಶಿಗಳು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅಲ್ಲದೆ, ಇಂತಹ ಅನಧಿಕೃತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆಯೂ ಅವರು ಕೋರಿದ್ದಾರೆ.
ಪೊಲೀಸರು ಅಥವಾ ಯಾವುದೇ ಸಂಘಟನೆಗಳು ಮಸೀದಿಗಳ ಮಾಹಿತಿಯನ್ನು ಕೇಳಿದ ಪ್ರಕರಣಗಳು ನಿಮ್ಮ ಜಿಲ್ಲೆಗಳಲ್ಲಿ ನಡೆದರೆ, ಕೂಡಲೇ ರಾಜ್ಯ ವಕ್ಫ್ ಮಂಡಳಿಯ ಕೇಂದ್ರ ಕಚೇರಿಗೆ ವರದಿ ಮಾಡುವಂತೆ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಜ್ಯದ ಎಲ್ಲ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿತ್ತು ಎನ್ನಲಾದ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಮಾತನಾಡುತ್ತಿರುವ ಮುಖಂಡರು, ಮಸೀದಿಗಳ ಮಾಹಿತಿಯನ್ನು ಕೂಲಂಕಷವಾಗಿ ಕಲೆ ಹಾಕುವಂತೆ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. "ದೇಶದಲ್ಲಿ ಪ್ರತಿದಿನ ಮಸೀದಿಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಮಸೀದಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ನಗರ ಪಾಲಿಕೆ, ಮುಖ್ಯ ಅಧಿಕಾರಿಗಳು, ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಪ್ರಶ್ನೆ ಮಾಡಿ, ಅನಧಿಕೃತ ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ. ಮಸೀದಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವುದು ವಿಳಂಬವಾಗುತ್ತದೆ. ಆದ್ದರಿಂದ, ಮಾಹಿತಿಗಳನ್ನು ನಮ್ಮ ವಕೀಲರಿಗೆ ನೀಡಿದರೆ, ನ್ಯಾಯಾಲಯದ ಮೊರೆ ಹೋಗಿ, ಆದೇಶವನ್ನು ತಂದು ಅನಧಿಕೃತ ಮಸೀದಿಗಳನ್ನು ತೆರವುಗೊಳಿಸಬಹುದಾಗಿದೆ" ಎಂದು ಸಂಘಪರಿವಾರದ ಮುಖಂಡರು ಹೇಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ದೇಶವನ್ನು ಒಡೆಯುವ ಪ್ರಯತ್ನ ಇದಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ, ಹಿಂದೂ ಹಾಗೂ ಮುಸ್ಲಿಮರ ನಡುವೆ ಕಂದಕ ನಿರ್ಮಿಸುವ ಪ್ರಯತ್ನ ಪ್ರಬಲವಾಗಿ ನಡೆಯುತ್ತಿದೆ. ಎಲ್ಲ ರಂಗಗಳನ್ನೂ ಕೇಸರಿಕರಣಗೊಳಿಸಲಾಗುತ್ತಿದೆ. ಇದನ್ನು ಪ್ರತಿರೋಧಿಸುವ ಶಕ್ತಿಗಳು ಛಿದ್ರವಾಗಿವೆ.
-ಎ.ಕೆ.ಸುಬ್ಬಯ್ಯ, ಹಿರಿಯ ನ್ಯಾಯವಾದಿ
ಮಸೀದಿಗಳನ್ನು ಅನಧಿಕೃತವಾಗಿ ಯಾರೂ ನಿರ್ಮಾಣ ಮಾಡಿರುವುದಿಲ್ಲ. ಆದ್ದರಿಂದ, ಮಸೀದಿಗಳ ಮುಖ್ಯಸ್ಥರು ಎಲ್ಲರಿಗೂ ತಮ್ಮ ದಾಖಲಾತಿಗಳನ್ನು ಪ್ರದರ್ಶನ ಮಾಡುವ ಅಗತ್ಯವಿಲ್ಲ. ಯಾವುದೇ ಸಂಘಟನೆಯ ಕಾರ್ಯಕರ್ತರು ಮಸೀದಿಗಳ ಮಾಹಿತಿ ಕಲೆ ಹಾಕಲು ಬಂದಲ್ಲಿ, ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಸ್ಥಳೀಯ ಪೊಲೀಸರು ಸಹಕಾರ ನೀಡದಿದ್ದರೆ, ಹಿರಿಯ ಪೊಲೀಸ್ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯ ಸಚಿವರು, ಪ್ರಾಧಿಕಾರಗಳ ಗಮನಕ್ಕೆ ತರಬೇಕು.
-ಮಸೂದ್ ಅಬ್ದುಲ್ ಖಾದರ್, ಸಂಚಾಲಕರು, ಮುಸ್ಲಿಂ ಮುತ್ತಹಿದ ಮಹಝ್