ಗ್ರಾಮೀಣ ಸೇವೆಗೆ ವೈದ್ಯರೇಕೆ ಹಿಂಜರಿಯುತ್ತಾರೆ?

Update: 2017-05-12 18:37 GMT

ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಅಲ್ಲಿಯ ಕಷ್ಟ ಕಾರ್ಪಣ್ಯಗಳನ್ನು, ವೈದ್ಯಕೀಯ ಚಿಕಿತ್ಸೆಗಾಗಿ ಅವರು ಪಡುವ ಯಾತನೆಯನ್ನು ಸ್ವತಃ ಅನುಭವಿಸಿದ, ಕಣ್ಣಾರೆ ನೋಡಿ, ಕಂಗೆಟ್ಟ ಹಳ್ಳಿಗರೇ, ಹಳ್ಳಿಯ ಕೆಂಪು ಬಸ್ಸನ್ನು ಹತ್ತಲು ಇಚ್ಛಿಸದಿರುವಾಗ, ಮೀನ ಮೇಷ ಎಣಿಸುವಾಗ, ನಗರದಿಂದ ಬಂದವರು ಅಲ್ಲಿಗೆ ಹೋಗಬಹುದೇ?


 2007 ರಿಂದ 2015 ರ ಅವಧಿಯಲ್ಲಿ, ದೇಶದಲ್ಲಿ 2.07 ಲಕ್ಷ ವೈದ್ಯಕೀಯ ಪದವೀಧರರು ವೈದ್ಯಕೀಯ ಕಾಲೇಜುಗಳಿಂದ ಹೊರಬಂದಿದ್ದಾರೆ. ಅವರಲ್ಲಿ ಸುಮಾರು ಮೂರನೆ ಒಂದು ಭಾಗದಷ್ಟು ಪದವೀಧರರು ದಕ್ಷಿಣ ಭಾರತದಿಂದ ಬಂದಿದ್ದು, 25,432 ವೈದ್ಯರು ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಂದಲೇ ಪದವಿ ಪಡೆದಿದ್ದಾರೆ.

 ಇಂದು ಕರ್ನಾಟಕದಲ್ಲಿ 18 ಸರಕಾರಿ ಮತ್ತು 37 ಖಾಸಗಿ ಕಾಲೇಜುಗಳು ಸೇರಿ ಸುಮಾರು 55 ವೈದ್ಯಕೀಯ ಕಾಲೇಜುಗಳಿವೆ. ಇನ್ನೂ 6 ಕಾಲೇಜುಗಳು ಆರಂಭವಾಗುತ್ತಿದ್ದು, ಕರ್ನಾಟಕವನ್ನು Mecca Of Medical Colleges  ಎಂದೂ ಕರೆಯುತ್ತಾರೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 4,000-5,000 ವೈದ್ಯಕೀಯ ಪದವೀಧರರು ಕಾಲೇಜಿನಿಂದ ಹೊರ ಬರುತ್ತಿದ್ದಾರೆ. ಆದರೂ, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಮತ್ತು ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಜನರು ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಅತೀ ಹೆಚ್ಚು ವೈದ್ಯರನ್ನು ದೇಶಕ್ಕೆ ನೀಡುವ ಪಟ್ಟಿಯಲ್ಲಿ ಕರ್ನಾಟಕ ಮೂರನೆ ಸ್ಥಾನದಲ್ಲಿದ್ದರೂ, ಕೆಲವು ಜಿಲ್ಲೆಗಳಲ್ಲಿ ಪ್ರತಿ 20,000 ರೋಗಿಗಳಿಗೆ (ಡಾಕ್ಟರ್ ಪೇಷೆಂಟ್ ಅನುಪಾತ 1:20,000) ಒಬ್ಬರು ವೈದ್ಯರು ಕಾಣುತ್ತಾರೆ. ಸ್ವಾತಂತ್ರ್ಯ ದೊರೆತು ಏಳು ದಶಕಗಳಾಗುತ್ತಿದ್ದರೂ ಗ್ರಾಮೀಣ ಜನರು ಇನ್ನೂ ಅಳಲೇಕಾಯಿ ಪಂಡಿತರನ್ನು, ನಕಲಿ ವೈದ್ಯರನ್ನು ಮತ್ತು ಅಂಚೆ ಮೂಲಕ ವೈದ್ಯ ಪದವಿ ಪಡೆದು ಫಲಕ ಹಾಕಿದವರನ್ನು ಆಶ್ರಯಿಸುವ ಹತಾಶ ಸ್ಥಿತಿ ಇದೆ.

ಹಳ್ಳಿಗರು ಸಾಕಷ್ಟು ಹಣ ಮತ್ತು ಸಮಯವನ್ನು ಖರ್ಚು ಮಾಡಿ ಕನಿಷ್ಠ ವೈದ್ಯಕೀಯ ಸೌಲಭ್ಯಕ್ಕೂ ಹತ್ತಿರದ ನಗರ ಮತ್ತು ಪಟ್ಟಣಗಳಿಗೆ ಧಾವಿಸಬೇಕಾಗುತ್ತದೆ. 2016ರಲ್ಲಿ 4,000 ವೈದ್ಯ ಪದವೀಧರರು ಎಮ್.ಬಿ.ಬಿ.ಎಸ್, ಎಮ್.ಡಿ ಆಥವಾ ಮೆಡಿಕಲ್ ಡಿಪ್ಲೊಮಾ ಮುಗಿಸಿದ್ದು, ಅವರಲ್ಲಿ ಕೇವಲ 12 ವೈದ್ಯರು ಗ್ರಾಮೀಣ ಸೇವೆಗೆ ಒಲವು ತೋರಿಸಿದ್ದಾರಂತೆ. 2015 ರಲ್ಲಿ 1,122 ವೈದ್ಯರನ್ನು ಗ್ರಾಮೀಣ ಸೇವೆಗೆ ಆಯ್ಕೆ ಮಾಡಿದರೆ, ಕೇವಲ ಶೇ. 40 ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರಂತೆ. ಸರ್ಜನ್ ಗಳಿಗೆ 1.30 ಮತ್ತು ಜನರಲ್ ಫಿಜಿಷಿಯನ್‌ಗಳಿಗೆ 1.00 ಲಕ್ಷ ಸಂಬಳ ಕೊಟ್ಟರೂ ಗ್ರಾಮೀಣ ಸೇವೆಗೆ ವೈದ್ಯರು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಆರೋಗ್ಯ ಮಂತ್ರಿಗಳು ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಸರಕಾರಿ ಆಸ್ಪತ್ರೆಗಳಿಗೂ ವೈದ್ಯರು ದೊರಕುತ್ತಿಲ್ಲ ಎಂದು ಅಸಮಾಧಾನ ತೋರಿಸಿದ್ದಾರೆ. ಸದ್ಯ 1,285 ತಜ್ಞರು, 684 ವೈದ್ಯರು ಮತ್ತು 1,753 ದಾದಿಯರನ್ನು ನೇಮಕ ಮಾಡಬೇಕಾಗಿದೆಯಂತೆ. 8,135 ಅರೆಕಾಲಿಕ ವೈದ್ಯರನ್ನೂ ಸೇರಿ ಸುಮಾರು 10,000 ಹುದ್ದೆಗಳು ಖಾಲಿ ಇವೆಯಂತೆ. ಹತ್ತು ಲಕ್ಷ ದಂಡವನ್ನಾದರೂ ಕೊಟ್ಟೇವು, ಆದರೆ, ಹಳ್ಳಿಗೆ ಹೋಗುವುದಿಲ್ಲ ಎಂದು ಖಡಾ ಖಂಡಿತವಾಗಿ ಸಾರುವ ವೈದ್ಯರು ಇದ್ದಾರಂತೆ.

2015ರಲ್ಲಿ ಕರ್ನಾಟಕ ಸರಕಾರ, ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯರಾಗಿ ಹೊರಬಂದವರಿಗೆ ಒಂದು ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡುವ ಮತ್ತು ಅಲ್ಲಿಯವರೆಗೆ ‘ವೈದ್ಯ ನೋಂದಣಿ’ ತಡೆ ಹಿಡಿಯುವ ಕಾನೂನನ್ನು ಮಾಡಿದರೂ, ನ್ಯಾಯಾಲಯದ ತಡೆ ಆಜ್ಞೆಯಿಂದ ಅದು ಜಾರಿಯಾಗಲಿಲ್ಲ. ವಿಷಾದವೆಂದರೆ, ವೈದ್ಯರು ‘ಭಾರೀ ದಂಡ’ ವನ್ನಾದರೂ ತೆರಲು ಸಿದ್ಧರಾಗುತ್ತಾರೆ ವಿನಹ ‘ಗ್ರಾಮೀಣ ಬಸ್ಸನ್ನು’ ಹತ್ತಲು ಮನಸ್ಸು ಮಾಡುವುದಿಲ್ಲ. ಕೋರ್ಸ್ ಮುಗಿಸಲು ಲಕ್ಷಗಟ್ಟಲೆ ಸುರಿದಿರುವಾಗ, ಈ ‘ಹತ್ತಿಪ್ಪತ್ತು ಲಕ್ಷ ದಂಡ’ ಅವರಿಗೆ ಜುಜುಬಿ ಮೊತ್ತ. ಸರಕಾರ ಈ ಕಾನೂನ್ನು ಮಾಡುವಾಗ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರೆ, ಬಹುಶಃ ಈ ತಡೆಯಾಜ್ಞೆಯ ತೊಡಕನ್ನು ನಿವಾರಿಸಿಕೊಳ್ಳಬಹುದಿತ್ತೇನೋ?

ಕರ್ನಾಟಕದಲ್ಲಿ 50 ವೈದ್ಯಕೀಯ ಕಾಲೇಜುಗಳಿದ್ದರೂ, ಬಹುತೇಕ ಕಾಲೇಜುಗಳು ವಂತಿಗೆ ಆಧಾರಿತ ಖಾಸಗಿ ಕಾಲೇಜುಗಳಾಗಿದ್ದು, ಅವುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕರ್ನಾಟಕೇತರರಾಗಿದ್ದು, ವಂತಿಗೆ ತರುವ ಉತ್ತರಭಾರತ, ತಮಿಳುನಾಡು, ಆಂಧ್ರ ಮತ್ತು ತಮಿಳುನಾಡಿನವರು. ಖಾಸಗಿ ಮೆಡಿಕಲ್ ಕಾಲೇಜಿನವರ ಶಿಕ್ಷಣ ಯಜ್ಞದ ಫಲವನ್ನು ಕನ್ನಡಿಗರಿಗಿಂತ ಕನ್ನಡೇತರರು ಹೆಚ್ಚಿಗೆ ಪಡೆದಿದ್ದಾರೆ ಎನ್ನುವ ಆರೋಪ ಲಾಗಾಯ್ತನಿಂದ ಕೇಳಿಬರುತ್ತಿದ್ದು, ಇದರ ಹಿಂದಿನ ಸತ್ಯದ ಅರಿವು ಈಗ ಆಗಿದೆ. ಈ ಆರೋಪದಲ್ಲಿ ಹುರುಳಿಲ್ಲದಿಲ್ಲ. ಈ ಕಾಲೇಜುಗಳಿಂದ ಪದವಿ ಪಡೆದ ‘ಹೊರಗಿನವರು’, ಪದವಿ ಪತ್ರ ಕೈಗೆ ಸಿಕ್ಕಿದ ತಕ್ಷಣ, ಲಭ್ಯ ಇರುವ ಮೊದಲ ವಿಮಾನ ಅಥವಾ ರೈಲನ್ನು ಏರಿ ತಮ್ಮೂರಿಗೆ ಮರಳುತ್ತಾರೆ. ಕೆಲವರಂತೂ ಕಡ್ಡಾಯವಾಗಿರುವ ‘ಇಂಟರ್ನ್‌ಶಿಪ್’ ನ್ನು ಹೇಗೋ ಕಷ್ಟದಲ್ಲಿ ಪೂರೈಸಿ ಕಾಲು ಕೀಳುತ್ತಾರೆ ಎನ್ನುವ ಅರೋಪವೂ ಕೇಳಿ ಬರುತ್ತಿದೆ. ಕೇವಲ ಕೆಲವು ನೂರು ಸಂಖ್ಯೆಯಲ್ಲಿ ಇರುವ ಕನ್ನಡಿಗ ವೈದ್ಯರು ದೊಡ್ಡ ಆಸ್ಪತ್ರೆ ಸೇರಿಕೊಳ್ಳುತ್ತಾರೆ, ಸ್ವಂತ ಕ್ಲಿನಿಕ್ ಮಾಡಿಕೊಳ್ಳುತ್ತಾರೆ ಮತ್ತು ವಿಶಾಲವಾದ 6.50 ಕೋಟಿ ಜನಸಂಖ್ಯೆಯ ರಾಜ್ಯದಲ್ಲಿ, ಕಂಡೂ ಕಾಣದಂತೆ ಸಮುದ್ರದಲ್ಲಿ ಅಲ್ಲೊಂದು ಇಲ್ಲೊಂದು ನೌಕೆಗಳು ಇರುವಂತೆ ಕಾಣುತ್ತಾರೆ.

ಮೆಡಿಕಲ್ ಶಿಕ್ಷಣ ಭಾರೀ ವೆಚ್ಚದಾಯಕವಾಗಿದ್ದು, ಬಹುತೇಕ ಪ್ರತಿಯೊಬ್ಬರೂ ಬ್ಯಾಂಕ್ ಸಾಲದ ಮೂಲಕವೇ ಮೆಡಿಕಲ್ ಕಾಲೇಜು ಸೇರುತ್ತಾರೆ. ಆರೇಳು ವರ್ಷದ ಕೋರ್ಸ್‌ಗೆ, ವೆಚ್ಚ ಲಕ್ಷಗಳನ್ನು ಮೀರಿ ಕೋಟಿ ಮುಟ್ಟುವ ಸಂದರ್ಭಗಳೂ ಇಲ್ಲದಿಲ್ಲ. ಅಂತೆಯೇ ಕೋರ್ಸ್ ಮುಗಿದ ತಕ್ಷಣ ಅವರ ಮೊದಲ ಆದ್ಯತೆ, ಬ್ಯಾಂಕ್ ಸಾಲದ ಬೇಡಿಯಿಂದ ಬಹುಬೇಗ ಬಿಡುಗಡೆಯಾಗುವ ನಿಟ್ಟಿನಲ್ಲಿ ಇದ್ದರೆ ತಪ್ಪೇನಿಲ್ಲ. ಜನಸೇವೆಯ ಹೆಸರಿನಲ್ಲಿ ಗ್ರಾಮೀಣ ಬಸ್ಸನ್ನು ಹತ್ತಿದರೆ, ಅವರ ಆದ್ಯತೆ ಪೂರೈಸಬಹುದೇ? ಅವರು ಬ್ಯಾಂಕ್ ಸಾಲದಿಂದ ಶೀಘ್ರ ಮುಕ್ತಿ ಪಡೆಯಬಹುದೇ?

ವೈದ್ಯ ಪದವೀಧರರು ಗ್ರಾಮೀಣ ಪ್ರದೇಶಗಳಿಗೆ ಹೋಗದಿರಲು ಇನ್ನೊಂದು ಮುಖ್ಯಕಾರಣ, ಗ್ರಾಮೀಣ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ. ಈ ನಿಟ್ಟಿನಲ್ಲಿ ಸಕಾರದ ಆಶ್ವಾಸನೆಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯಗತವಾಗಿಲ್ಲ. ಎಷ್ಟೋ ಗ್ರಾಮೀಣ ಆಸ್ಪತ್ರೆಗಳಿಗೆ, ಸರಿಯಾದ ಕಟ್ಟಡಗಳಿಲ್ಲ, ಸಲಕರಣೆಗಳಿಲ್ಲ, ಔಷಧಗಳಿಲ್ಲ, ಸಿಬ್ಬಂದಿಯಿಲ್ಲ, ಸರಿಯಾದ ರಸ್ತೆ ಸಂಪರ್ಕ ಮತ್ತು ಸಾರಿಗೆಗಳಿಲ್ಲ, ವೈದ್ಯರಿಗೆ ವಸತಿಗಳಿಲ್ಲ, ಆಧುನಿಕ ಕಮ್ಯುನಿಕೇಷನ್ ಮಾಧ್ಯಮಗಳಿಲ್ಲ ಎನ್ನುವ ಮಾತು ಕೇಳಿಬರುತ್ತದೆ. ಅವರಿಗೆ ಸಂಬಳದಂತೆ ಕನಿಷ್ಠ ನಾಗರಿಕ ಸೌಲಭ್ಯಗಳೂ ಮುಖ್ಯ. ಈ ದಿನಗಳಲ್ಲಿ ವೈದ್ಯಕೀಯ ಅಭ್ಯಸಿಸುವವರಲ್ಲಿ ಉಳ್ಳವರೇ ಹೆಚ್ಚು. ಸಕಲ ಸವಲತ್ತು ಮತ್ತು ಸೌಲಭ್ಯಗಳ ಮಧ್ಯೆ ನಗರದಲ್ಲಿ ಬದುಕು ಸಾಗಿಸಿದ ಅವರು ದಿಢೀರ್ ಎಂದು ಹಳ್ಳಿಕೊಂಪೆಗೆ ಇಳಿಯಬಹುದೇ? ಆರೇಳು ವರ್ಷ ಬದುಕಿನ ಆಶೆ ಆಕಾಂಕ್ಷೆಗಳನ್ನು ಹತ್ತಿಕ್ಕಿ ಪದವಿಗಾಗಿ ಜೀವ ಸವೆಸಿದ ಅವರು, ಜೀವನದ ಕೆಲಕಾಲವನ್ನಾದರೂ ಸಂತೃಪ್ತಿಯಿಂದ ಬದುಕಲು ಇಚ್ಛಿಸುತ್ತಾರೆ. ವಿಚಿತ್ರವೆಂದರೆ, ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಅಲ್ಲಿಯ ಕಷ್ಟ ಕಾರ್ಪಣ್ಯಗಳನ್ನು, ವೈದ್ಯಕೀಯ ಚಿಕಿತ್ಸೆಗಾಗಿ ಅವರು ಪಡುವ ಯಾತನೆಯನ್ನು ಸ್ವತಃ ಅನುಭವಿಸಿದ, ಕಣ್ಣಾರೆ ನೋಡಿ, ಕಂಗೆಟ್ಟ ಹಳ್ಳಿಗರೇ, ಹಳ್ಳಿಯ ಕೆಂಪು ಬಸ್ಸನ್ನು ಹತ್ತಲು ಇಚ್ಛಿಸದಿರುವಾಗ, ಮೀನ ಮೇಷ ಎಣಿಸುವಾಗ, ನಗರದಿಂದ ಬಂದವರು ಅಲ್ಲಿಗೆ ಹೋಗಬಹುದೇ?

ಗ್ರಾಮೀಣ ಜೀವನದ ಸೊಗಡು, ಆ ಸರಳ ಮತ್ತು ಮುಗ್ಧ ಜೀವನ, ಮಾಲಿನ್ಯ ಮತ್ತು ದಟ್ಟನೆ ರಹಿತ ಬದುಕು, ಸ್ವಚ್ಛ ಪರಿಸರವನ್ನು ಯಾರು ಎಷ್ಟೇ ಹೊಗಳಿ ಹಾಡಲಿ, ಅದು ವಾರಾಂತ್ಯದ ಮೋಜಿಗೆ ಮತ್ತು ನಗರ ಬದುಕಿನ, ಉಸಿರು ಬಿಗಿಯುವ ದಟ್ಟನೆ ಮತ್ತು ಒತ್ತಡಗಳಿಂದ ಒಂದೆರಡು ದಿನ ಪಾರಾಗಲು ಸೀಮಿತವಾಗಿದೆಯೇ ಹೊರತು, ಬದುಕಿನ ಬಂಡಿಯನ್ನು ಖಾಯಂ ಆಗಿ ನಡೆಸಲಲ್ಲ ಎನ್ನುವ ಸತ್ಯ ವೈದ್ಯರಿಗೂ ಚೆನ್ನಾಗಿ ಗೊತ್ತು. ನಾಡಿ ಮತ್ತು ಹೃದಯದ ಬಡಿತವನ್ನು ಲೆಕ್ಕ ಹಾಕುವ ಅವರು ಈ ವಾಸ್ತವವನ್ನು ತಿಳಿಯದಿರಲಾರರೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News