ವಿರೋಧ ಪಕ್ಷಗಳು ನಿಜಕ್ಕೂ ಜೊತೆಗೂಡಬಲ್ಲವೇ?

Update: 2017-05-15 18:32 GMT

ವ್ಯಕ್ತಿಗಳು ನಿಜಕ್ಕೂ ಮುಖ್ಯರಾಗುತ್ತಾರಾದರೂ ರಾಜಕಾರಣವು ಅದನ್ನು ಮೀರಿ ಬೆಳೆಯಬೇಕಿದೆ. ಬಿಜೆಪಿಯನ್ನು ಪರಿಣಾಮಕಾರಿಯಾಗಿ ಎದುರಿಸಬೇಕೆಂದರೆ ಅದರ ವಿರೋಧಿಗಳು ಅದಕ್ಕಿಂತ ಭಿನ್ನವಾದ ಮತ್ತು ಪರ್ಯಾಯವೊಂದನ್ನು ಮತ್ತು ವಿಭಿನ್ನ ನೀತಿ ಮತ್ತು ಕಾರ್ಯಕ್ರಮಗಳನ್ನು ಮುಂದಿಡಬೇಕಾಗುತ್ತದೆ.


ರಲಿರುವ ಜುಲೈ 25ಕ್ಕೆ ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಿವೃತ್ತರಾಗಲಿದ್ದು, ಅದಕ್ಕೆ ಮುನ್ನ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಬಿಜೆಪಿಯೇತರ ಪಕ್ಷಗಳೆಲ್ಲಾ ಒಂದಾಗಿ ಸರ್ವ ಸಮ್ಮತ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬಹುದು. ಆದರೆ ಬಿಹಾರ ರೀತಿಯ ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿ ಒಂದು 2019ರ ಚುನಾವಣೆಗೆ ಮುನ್ನ ರೂಪುಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬಹುದು. ಎಲ್ಲಾ ಬಿಜೆಪಿಯೇತರ ಓಟುಗಳು ಒಟ್ಟಾದರೆ ಬಿಜೆಪಿಯನ್ನು ಸೋಲಿಸುವುದು ಸುಲಭ ಎಂದು ಎಣಿಸಲಾಗುತ್ತಿದೆ. ಆದರೆ ರಾಜಕೀಯವೆಂಬುದು ಕೇವಲ ಒಂದು ಚುನಾವಣಾ ಅಂಕಗಣಿತವಲ್ಲ.

ಉದಾಹರಣೆಗೆ ಉತ್ತರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೇ ಸಮಾಜವಾದಿ ಪಕ್ಷದ ನೇತಾರರಾಗಿ ಮುಂದುವರಿಯುವುದಾದರೆ ಅದರೊಂದಿಗೆ ಮೈತ್ರಿಗೆ ಸಿದ್ದವಿದ್ದೇವೆಂಬ ಸೂಚನೆಯನ್ನು ಬಹುಜನ ಸಮಾಜ ಪಕ್ಷದ ಮಾಯಾವತಿಯವರು ನೀಡಿದ್ದಾರೆ. ಆದರೆ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪಶಿವಪಾಲ್ ಯಾದವ್ ಅವರು ಅಖಿಲೇಶ್ ಯಾದವ್ ಮೇಲೆ ನಡೆಸುತ್ತಿರುವ ದಾಳಿಗಳನ್ನು ನೋಡಿದರೆ ಅವರು ತನ್ನ ಸ್ಥಾನ ವನ್ನು ಕಾಪಾಡಿಕೊಳ್ಳಬಲ್ಲರೇ ಎಂಬುದು ಪ್ರಶ್ನಾರ್ಹವಾಗಿದೆ. ಆದರೆ ವಿಪರ್ಯಾಸವೆಂದರೆ ಇಂದು ಎಸ್ಪಿಯ ಪರಿಸ್ಥಿತಿಯು 1993ರಲ್ಲಿ ಅದು ಬಿಎಸ್ಪಿಯ ಜೊತೆ ಸೇರಿ ಅಧಿಕಾರಕ್ಕೆ ಬಂದಾಗಿದ್ದ ಸ್ಥಿತಿಗಿಂತ ತೀರಾ ದುರ್ಬಲವಾಗಿದೆ. ಅಲ್ಲದೆ, ಮುಲಾಯಂ ಮತ್ತು ಶಿವಪಾಲ್ ಬೆಂಬಲಿಗರೆಂದು ಹೇಳಲಾದ ಗೂಂಡಾಗಳು ತನ್ನ ಮೇಲೆ 1995ರ ಜೂನ್ 2ರಂದು ನಡೆಸಿದ ದಾಳಿಯನ್ನು ಮಾಯಾವತಿ ಮರೆಯಗೊಡುವರೇ ಎಂಬುದು ಸಹ ಪ್ರಶ್ನಾರ್ಹವಾದ ಸಂಗತಿಯೇ ಆಗಿದೆ.

ಮಾಯಾವತಿಯಂತೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸಿಪಿಎಂ ನೇತೃತ್ವದ ಎಡರಂಗದ ವಿರುದ್ಧ ತೀರಿಸಿಕೊಳ್ಳಬೇಕಾದ ಹಲವಾರು ವೈಯಕ್ತಿಕ ಸೇಡುಗಳಿವೆ. 1991ರಲ್ಲಿ ಸಿಪಿಎಂಗೆ ಸೇರಿದವರೆಂದು ಆರೋಪಿಸಲಾದ ಕೆಲವು ಗೂಂಡಾಗಳು ನಡೆಸಿದ ದಾಳಿಯಲ್ಲಿ ತಲೆಗೆ ಗಾಯವಾದ ಪ್ರಕರಣವನ್ನು ಅವರು ಮರೆತಿರಲಾರರು. ಹಾಗಿದ್ದರೂ ಇಂದು ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್‌ಗಳೆರಡಕ್ಕೂ ರಾಜ್ಯ ಮತ್ತು ಕೇಂದ್ರಗಳೆರಡರಲ್ಲೂ ಬಿಜೆಪಿಯೇ ಪ್ರಧಾನ ಶತ್ರುವಾಗಿದೆ. ರಾಷ್ಟ್ರ ಮಟ್ಟದಲ್ಲಿ ಮೈತ್ರಿಕೂಟವೊಂದು ರೂಪುಗೊಂಡರೂ 2019ರ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು ಮತ್ತು ಟಿಎಂಸಿಗಳು ಪರಸ್ಪರರ ವಿರುದ್ಧ ಸ್ಪರ್ಧಿಗಳನ್ನು ನಿಲ್ಲಿಸುವುದಿಲ್ಲವೇ? ಸದ್ಯಕ್ಕಂತೂ ಈ ಪ್ರಶ್ನೆಗೆ ಉತ್ತರವಿಲ್ಲ.

ತಮಿಳುನಾಡುವಿನಲ್ಲಿ ಇಂದು ಎಐಎಡಿಎಂಕೆ ಅತಂತ್ರ ಪರಿಸ್ಥಿತಿಯಲ್ಲಿರು ವಾಗ ಬಿಜೆಪಿಯು ಅಲ್ಲಿ ಒಳನುಸುಳಲು ದಾರಿಗಳನ್ನು ಕಂಡುಕೊಳ್ಳಲು ಯತ್ನಿಸುತ್ತಿದೆ. ಎಐಎಡಿಎಂಕೆಯು ತನ್ನ ಬದ್ಧವೈರಿಯಾದ ಡಿಎಂಕೆಯೊಡನೆ ಹೊಂದಾಣಿಕೆ ಮಾಡಿಕೊಳ್ಳುವುದಂತೂ ಅಸಾಧ್ಯವಾದ ಮಾತು. ಒಡಿಶಾದಲ್ಲಿ ನಾಲ್ಕುಬಾರಿ ಮುಖ್ಯಮಂತ್ರಿಯಾಗಿರುವ ನವೀನ್ ಪಾಟ್ನಾಯಕ್‌ರ ನೇತೃತ್ವದ ಬಿಜು ಜನತಾ ದಳವನ್ನು (ಬಿಜೆಡಿ) ಬಿಜೆಪಿ ಅತ್ಯಂತ ನಿಕಟವಾಗಿ ಬೆಂಬತ್ತಿದೆ. ಅಲ್ಲಿ ಬಿಜೆಡಿಯು ಕಾಂಗ್ರೆಸ್‌ನೊಂದಿಗೆ ಮೈತ್ರಿಮಾಡಿಕೊಳ್ಳುವುದರಲ್ಲಿ ಯಾವುದೇ ರಾಜಕೀಯ ಅರ್ಥವಿರುವುದಿಲ್ಲ. ಏಕೆಂದರೆ ಅದು ಸಹಜವಾಗಿ ಬಿಜೆಪಿ ವಿರೋಧಿ ಮೈತ್ರಿಯಾಗಿರುತ್ತದಾದ್ದರಿಂದ ಅಂಥಾ ನಡೆಯು ಆ ರಾಜ್ಯದಲ್ಲಿ ಬಿಜೆಪಿ ಪರವಾದ ಮತಗಳನ್ನು ಸಧೃಢೀಕರಿಸುವ ಸಾಧ್ಯತೆಯೇ ಹೆಚ್ಚು. ಕೇರಳದಲ್ಲೂ ದೊಡ್ಡ ಶತ್ರುವಿನ ವಿರುದ್ಧ ಎಡಪಕ್ಷಗಳು ಮತ್ತು ಕಾಂಗ್ರೆಸ್ ಒಟ್ಟಾಗುವುದು ಕಷ್ಟಸಾಧ್ಯ.

 1967, 1977 ಮತ್ತು 1989ರಲ್ಲಿ ಕೇಂದ್ರದಲ್ಲಿ ಒಂದು ಬಲವಾದ ಕಾಂಗ್ರೆಸ್ ವಿರೋಧಿ ಮೈತ್ರಿಕೂಟದ ಸರಕಾರಗಳು ರಚನೆಯಾಗಿದ್ದವು. 1967ರಲ್ಲಿ ಸಮಾಜವಾದಿ ನಾಯಕರಾದ ರಾಮ ಮನೋಹರ ಲೋಹಿಯಾ ಮತ್ತು ಮಧು ಲಿಮಯೆರಂತವರ ನೇತೃತ್ವದಲ್ಲಿ ಎಡ ಮತ್ತು ಬಲ (ಆಗ ಜನ ಸಂಘ ಬಲಬಣವನ್ನು ಪ್ರತಿನಿಧಿಸುತ್ತಿತ್ತು) ಪಕ್ಷಗಳೆರಡೂ ಒಟ್ಟಾಗಿ ಉತ್ತರ ಭಾರತದಲ್ಲಿ ಕಾಂಗ್ರೆಸ್ಸನ್ನು ಸೋಲಿಸಿದ್ದವು. ತುರ್ತುಪರಿಸ್ಥಿತಿಯ ನಂತರದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೆಲ್ಲಾ ಒಂದಾಗಿ 1977ರ ಮಾರ್ಚ್‌ನಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಸೋಲಿಸಿದ್ದವು. 1989ರ ಡಿಸೆಂಬರ್‌ನಲ್ಲಿ ವಿಶ್ವನಾಥ್ ಪ್ರತಾಪ್ ಸಿಂಗರು ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಅನ್ನು ಸೋಲಿಸಲು ಸ್ವಲ್ಪಕಾಲ ಎಡ ಮತ್ತು ಬಲ ಪಕ್ಷಗಳೆರಡನ್ನೂ ಒಟ್ಟಿಗೆ ತಂದಿದ್ದರು. ಆದರೆ ಆಗಿನ ಮತ್ತು ಈಗಿನ ಸಂದರ್ಭಗಳು ಭಿನ್ನ ಭಿನ್ನವಾಗಿವೆ.

ಒಂದು ಸ್ಪಷ್ಟವಾದ ರಾಜಕೀಯ ಕಾರ್ಯಕ್ರಮವಿಲ್ಲದೆ ವ್ಯಕ್ತಿಗಳನ್ನೇ ಅತಿಯಾಗಿ ಆಧರಿಸಿ ರೂಪುಗೊಳ್ಳುವ ರಾಜಕೀಯ ಮೈತ್ರಿಕೂಟಗಳು ಕೇವಲ ಅಲ್ಪಜೀವಿಯಾಗಿರುತ್ತವೆ. ಮಾತ್ರವಲ್ಲದೆ ವ್ಯತಿರಿಕ್ತ ಪರಿಣಾಮವನ್ನೂ ಬೀರಬಲ್ಲದು. ಉದಾಹರಣೆಗೆ ಅಟಲ್ ಬಿಹಾರಿ ವಾಜಪೇಯಿಯವರು ಉತ್ತಮ ನಾಯಕನೆಂಬ ಜನಪ್ರಿಯತೆ ಪಡೆದುಕೊಂಡಿದ್ದರೂ, ಪ್ರಾಯಶಃ ಆಡಳಿತಾರೂಢ ಸರಕಾರ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಭ್ರಮೆಯಲ್ಲಿ ಮುಳುಗಿದ್ದರಿಂದ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕೆಂಬ ಮೋದಿಯವರ ಕನಸು ಇನ್ನೂ ಪೂರ್ಣಾರ್ಥದಲ್ಲಿ ನನಸಾಗಿಲ್ಲ. ಭಾರತದ ಈ ಅತ್ಯಂತ ಹಿರಿಯ ಹಳೆಯ ಪಕ್ಷವಾದ ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿ ಹೀನಾಯವಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದು ಬಲವಾದ ಬಿಜೆಪಿ ವಿರೋಧಿ ಮೈತ್ರಿಕೂಟವು ರೂಪುಗೊಳ್ಳುವುದರಲ್ಲೇ ಅದರ ಹಿತವಡಗಿದೆ.

ಬಿಹಾರದಂತೆ ಇತರ ರಾಜ್ಯಗಳಲ್ಲೂ ಮಹಾ ಮೈತ್ರಿಕೂಟದ ರಚನೆಯಾಗುವುದು ಕಷ್ಟಸಾಧ್ಯ. ಹಾಗೆಂದು ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ವಿರೋಧಿಸುವ ವಿವಿಧ ಪಕ್ಷಗಳು ಹತಾಶೆಗೊಳಗಾಗಿ ಮೋದಿಯ ರಥಯಾತ್ರೆಯನ್ನು ನಿಲ್ಲಿಸಬಲ್ಲ ಕಾರ್ಯಕ್ರಮವನ್ನು ಮತು ತಂತ್ರಗಳನ್ನು ರೂಪಿಸುವುದನ್ನು ಮರೆಯಬೇಕಿಲ್ಲ. ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸೈದ್ಧಾಂತಿಕವಾಗಿ ಏಕಶಿಲಾರೂಪಿಯಾಗಿರುವ ಪಕ್ಷವೊಂದು ಲೋಕಸಭೆಯಲ್ಲಿ ತನ್ನ ಬಲದಿಂದಲೇ ಬಹುಮತವನ್ನು ಪಡೆದುಕೊಂಡಿದೆ. ವ್ಯಕ್ತಿಗಳು ನಿಜಕ್ಕೂ ಮುಖ್ಯರಾಗುತ್ತಾರಾದರೂ ರಾಜಕಾರಣವು ಅದನ್ನು ಮೀರಿ ಬೆಳೆಯಬೇಕಿದೆ. ಬಿಜೆಪಿಯನ್ನು ಪರಿಣಾಮಕಾರಿಯಾಗಿ ಎದುರಿಸಬೇಕೆಂದರೆ ಅದರ ವಿರೋಧಿಗಳು ಅದಕ್ಕಿಂತ ಭಿನ್ನವಾದ ಮತ್ತು ಪರ್ಯಾಯವೊಂದನ್ನು ಮತ್ತು ವಿಭಿನ್ನ ನೀತಿ ಮತ್ತು ಕಾರ್ಯಕ್ರಮಗಳನ್ನು ಮುಂದಿಡಬೇಕಾಗುತ್ತದೆ.

ಕೃಪೆ: Economic and Political Weekly 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News