ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಬಗ್ಗೆ ಸುಳ್ಳು ಹರಡಿದ ಆರೋಪ: ಕೇರಳದ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

Update: 2017-05-17 03:38 GMT

ತಿರುವನಂತಪುರಂ, ಮೇ 17: ಪಯ್ಯನೂರಿನಲ್ಲಿ ಮೇ 12ರಂದು ನಡೆದ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯ ಸಂಬಂಧ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನೊಮ್ ರಾಜಶೇಖರನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಸಿರಾಜ್ ಅವರ ದೂರಿನ ಆಧಾರದಲ್ಲಿ ರಾಜಶೇಖರನ್ ವಿರುದ್ಧ ಐಪಿಸಿ ಸೆಕ್ಷನ್ 153(ಎ) ಅನ್ವಯ ವಿವಿಧ ಗುಂಪುಗಳ ನಡುವೆ ದ್ವೇಷ ಹಬ್ಬಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ರಾಜಶೇಖರನ್ ಅವರು ಫೇಸ್ ಬುಕ್ ನಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿ ಪಯ್ಯನೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಚೂರಕಡು ಬಿಜು ಅವರ ಹತ್ಯೆಯನ್ನು ಸಿಪಿಐ(ಎಂ) ಕಾರ್ಯಕರ್ತರು ಆಚರಿಸುತ್ತಿದ್ದಾರೆಂದು ಬರೆದಿದ್ದರು. ಇದನ್ನು ನಿರಾಕರಿಸಿದ್ದ ಸಿಪಿಐ(ಎಂ), ರಾಜಶೇಖರನ್ ಅವರು ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆಂದು ಆರೋಪಿಸಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಈ ವೀಡಿಯೋ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಅದನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರಲ್ಲದೆ ಬಿಜೆಪಿ ನಾಯಕನ ಆರೋಪ ತಪ್ಪು ಎಂದಿದ್ದರು.

ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಬಿಜು 2016ರಲ್ಲಿ ನಡೆದ ಸಿಪಿಐ(ಎಂ) ಕಾರ್ಯಕರ್ತನ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದರಲ್ಲದೆ ಹತ್ಯೆಗೀಡಾದ ಸಂದರ್ಭ ಜಾಮೀನಿನ ಮೇಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News