×
Ad

ಸಾರ್ವಜನಿಕ ಉದ್ಯಮ ಖಾಸಗೀಕರಣ ಖಂಡಿಸಿ ಮೇ 30 ರಂದು ಪ್ರತಿಭಟನೆ

Update: 2017-05-17 19:44 IST

ಬೆಂಗಳೂರು, ಮೇ 17: ಸಾರ್ವಜನಿಕ ವಲಯವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರಕಾರ ಕ್ರಮವನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಮೇ 30 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ದೇಶದಲ್ಲಿ ಸಾರ್ವಜನಿಕ ಉದ್ಯಮಗಳಿಂದ ವಾರ್ಷಿಕ ಸಾವಿರಾರು ಕೋಟಿ ರೂ.ಗಳಷ್ಟು ಆದಾಯ ಪಡೆಯುತ್ತಿದ್ದರೂ, ಕೇಂದ್ರ ಸರಕಾರ ಇದನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಈಗಾಗಲೇ ಯುಪಿಎ ಸರಕಾರದ ಆಡಳಿತದಲ್ಲಿ ಶೇ 49.5ರಷ್ಟು ಸಾರ್ವಜನಿಕ ಉದ್ಯಮದ ಷೇರನ್ನು ಖಾಸಗಿಯವರಿಗೆ ನೀಡಲಾಗಿದೆ. ಇದೀಗ ಮೋದಿ ಸರಕಾರ ಮೇ ಆರಂಭದಿಂದ ಶೇ.26 ರಷ್ಟು ಷೇರನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದ್ದು, ಒಟ್ಟಾರೆಯಾಗಿ ಶೇ.72 ರಷ್ಟು ಸಾರ್ವಜನಿಕ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ ಎಂದು ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
 
ರಾಜ್ಯದ ಮೂರು ಬಿಇಎಂಎಲ್ ಘಟಕಗಳು ಸೇರಿದಂತೆ ದೇಶದ 4 ಉತ್ಪಾದನಾ ಘಟಕಗಳನ್ನು ರಕ್ಷಣಾ ಸಚಿವಾಲಯದಡಿಯಲ್ಲಿ 1964 ರಲ್ಲಿ ಆರಂಭಿಸಲಾಯಿತು. ಅಂದಿನಿಂದ ಸಂಸ್ಥೆಯು ರಕ್ಷಣಾ ಪಡೆಗಳಿಗೆ ಬೃಹತ್ ಟ್ರಕ್ಕುಗಳು, ಗಣಿಗಾರಿಕೆ ಅಗತ್ಯವಿರುವ ಬೃಹತ್ ಯಂತ್ರೋಪಕರಣಗಳು, ಭಾರತೀಯ ರೈಲ್ವೆಗೆ ಅಗತ್ಯವಿರುವ ರೈಲು ಬೋಗಿಗಳು, ಮೆಟ್ರೋ ಕೋಚ್‌ಗಳನ್ನು ನಿರ್ಮಿಸಿ ಕೊಟ್ಟಿದೆ. ಬೆಮೆಲ್‌ನಿಂದ ದೇಶಕ್ಕೆ ಅಗತ್ಯವಾದ ಯಂತ್ರೋಪಕರಣಗಳನ್ನು ತಯಾರಿಸಿ ಕೊಟ್ಟು, ಆಮದು ಮಾಡಿಕೊಳ್ಳುವ ಹಂಗಿನಿಂದ ಪಾರು ಮಾಡಿದೆ. ಆದರೆ, ಇದೀಗ ಈ ಸಂಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು. 


ಸಾರ್ವಜನಿಕ ಉದ್ಯಮದ ಖಾಸಗೀಕರಣವನ್ನು ರಾಜ್ಯ ಸರಕಾರ ಖಂಡಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದ ಅವರು, ಕೇವಲ 250 ಕಾರ್ಮಿಕರನ್ನು ಹೊಂದಿರುವ ಕೇರಳ ಸರಕಾರ ಖಾಸಗೀಕರಣವನ್ನು ವಿರೋಧಿಸಿ ಅಧಿಸೂಚನೆ ಹೊರಡಿಸಿದೆ. ಅದೇ ರೀತಿ ತಮಿಳುನಾಡು ಸೇರಿದಂತೆ ಹಲವು ರಾಜ್ಯ ಸರಕಾಗಳು ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿವೆ. 50-60 ಸಾವಿರ ಕಾರ್ಮಿಕರಿರುವ ರಾಜ್ಯದಲ್ಲಿ ಕೇಂದ್ರ ಸರಕಾರದ ಆದೇಶವನ್ನು ವಿರೋಧಿಸಲು ಮುಂದಾಗುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರಕಾರದ ನಿರ್ಧಾರವನ್ನು ಖಂಡಿಸಿ ಮೇ 30 ರಂದು ಬೆಂಗಳೂರು, ಮೈಸೂರು, ಕೆಜಿಎಫ್ ಮತ್ತು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸರಕಾರ ಮುಂದಿನ ದಿನಗಳಲ್ಲಿ ನಿರ್ಧಾರ ಬದಲಿಸಲಿಲ್ಲ ಎಂದಾದರೆ ಕರ್ನಾಟಕ ಬಂದ್‌ಗೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಮುಖಂಡ ಅನಂತ ಸುಬ್ಬಾರಾವ್, ಐಎನ್‌ಟಿಯುಸಿ ಮುಖಂಡ ಕೆ.ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News