×
Ad

ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು ಮಂಜೂರು

Update: 2017-05-17 19:55 IST

ಬೆಂಗಳೂರು, ಮೇ 17: ಜಂತಕಲ್ ಮೈನಿಂಗ್ ಕಂಪೆನಿಗೆ ಅಕ್ರಮವಾಗಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಿಟಿ ಸಿವಿಲ್ ಕೋರ್ಟ್ ಒಂದು ವಾರಗಳ ಕಾಲ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

       
  ಈ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ವೈ.ವನಮಾಲಾ ಆನಂದ್‌ರಾವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲ ಹಶ್ಮತ್ ಪಾಷಾ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
        
  ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಐಟಿ ಪರ ವಕೀಲ ಗೋವಿಂದನ್ ಅವರು, ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಬೇಕಾಗಿದೆ. ಹೀಗಾಗಿ, ಅವರಿಗೆ ನ್ಯಾಯಪೀಠವು ಜಾಮೀನು ಮಂಜೂರು ಮಾಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಕುಮಾರಸ್ವಾಮಿ ಅವರು ವಿದೇಶಕ್ಕೆ ಹೋಗಬಾರದು, 5 ಲಕ್ಷ ರೂ.ವೈಯಕ್ತಿಕ ಬಾಂಡ್ ನೀಡಬೇಕು, ಸಾಕ್ಷ ನಾಶ ಮಾಡಬಾರದು, ಎಸ್‌ಐಟಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹೋಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
     

ಪ್ರಕರಣವೇನು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಸಂಬಂಧ ವಕೀಲ ವಿನೋದ್ ಖಾಸಗಿ ದೂರು ಸಲ್ಲಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಂತಕಲ್ ಮೈನಿಂಗ್ ಕಂಪೆನಿಗೆ ಕಾನೂನು ಬಾಹಿರವಾಗಿ ಅದಿರು ಸಾಗಿಸಲು ಅನುಮತಿ ನೀಡಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿದಂತೆ ಎಚ್‌ಡಿಕೆ ಅವರನ್ನು ವಿಚಾರಣೆಗಾಗಿ ಬಂಧಿಸುವ ನಿರೀಕ್ಷೆ ಇತ್ತು. ಹೀಗಾಗಿ, ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

  ಜಂತ್‌ಕಲ್‌ಗೆ ಪರವಾನಗಿ ವರ್ಗಾವಣೆ: 1965ರಲ್ಲಿ ರಾಘವೇಂದ್ರರಾವ್ ಎಂಬುವವರು ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿ ಹಾಗೂ ತನಿಗೇಹಳ್ಳಿಯಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದರು. 1967ರಲ್ಲಿ ಗಣಿ ಪರವಾನಗಿಯನ್ನು ಜಂತಕಲ್ ಎಂಟರ್ ಪ್ರೈಸಸ್ ಖರೀದಿಸಿ, ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿತ್ತು.
 

2007ರಲ್ಲಿ ಎರಡೂ ಗಣಿ ಗುತ್ತಿಗೆ ಪರವಾನಗಿಯನ್ನು 40 ವರ್ಷಗಳವರಗೆ ಎರಡು ಆದೇಶಗಳಲ್ಲಿ ನವೀಕರಿಸಲಾಗಿತ್ತು. ಅಂದರೆ, 1985ರಿಂದ 2005ರವರೆಗೆ ಇದ್ದ ಗುತ್ತಿಗೆ ಪರವಾನಗಿಯನ್ನು 2025ರವರೆಗೆ ನವೀಕರಿಸಲಾಗಿತ್ತು. ಅಲ್ಲದೆ, ಅದಿರು ಸಾಗಣೆ ಅನುಮತಿಯನ್ನೂ ಜಂತಕಲ್ ಎಂಟರ್ ಪ್ರೈಸಸ್ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News