ದಕ್ಷಿಣ ಲಿಬಿಯಾ ವಾಯುನೆಲೆ ಮೇಲೆ ದಾಳಿ: 141 ಮಂದಿ ಮೃತ್ಯು

Update: 2017-05-20 04:17 GMT

ಟ್ರಿಪೊಲಿ, ಮೇ 20: ದಕ್ಷಿಣ ಲಿಬಿಯಾದ ವಾಯುನೆಲೆಯ ಮೇಲೆ ನಡೆದ ದಾಳಿಯೊಂದರಲ್ಲಿ 141 ಜನರು ಮೃತಪಟ್ಟಿದ್ದಾರೆ. ಸತ್ತವರಲ್ಲಿ ಹೆಚ್ಚಿನವರು ಸ್ವಘೋಷಿತ ಮಿಲಿಟರಿ ನಾಯಕ ಖಲೀಫಾ ಹಫ್ತರ್ ಬೆಂಬಲಿಗ ಸೈನಿಕರು ಎಂದು ತಿಳಿದು ಬಂದಿದೆ.

ವಿಶ್ವಸಂಸ್ಥೆ ಬೆಂಬಲಿತ ಟ್ರಿಪೊಲಿ ಸರಕಾರಕ್ಕೆ ನಿಷ್ಠರಾಗಿರುವ ಥರ್ಡ್ ಫೋರ್ಸ್ ಮಿಲಿಷಿಯಾದ ಸದಸ್ಯರು ಹಫ್ತರ್ ಅವರ ಸ್ವಘೋಷಿತ ಲಿಬಿಯನ್ ನ್ಯಾಷನಲ್ ಆರ್ಮಿ ಉಪಯೋಗಿಸುತ್ತಿರುವ ವಾಯನೆಲೆಯ ಮೇಲೆ ದಾಳಿ ನಡೆಸಿದೆ. ಬ್ರಕ್ ಅಲ್ ಶತಿ ಎಂಬ ಹೆಸರಿನ ಈ ವಾಯುನೆಲೆ ಮತ್ತು ಅದರ ಸುತಮುತ್ತ ಕೆಲಸ ಮಾಡುತ್ತಿದ್ದ ನಾಗರಿಕರೂ ಈ ದಾಳಿಯಲ್ಲಿ ಮೃತಪಟ್ಟಿದ್ದ್ದು, ಸ್ಥಳದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಸೈನಿಕರು ಮಿಲಿಟರಿ ಪೆರೇಡ್ ಒಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ದಾಳಿ ನಡೆದಿತ್ತು. ಅವರಲ್ಲಿ ಯಾರೂ ಶಸ್ತ್ರಸಜ್ಜಿತರಾಗಿರಲಿಲ್ಲ ಎಂದು ತಿಳಿದು ಬಂದಿದೆ. ಘಟನೆಯ ತನಿಖೆಗೆ ಆಯೋಗವೊಂದನ್ನು ರಚಿಸಲಾಗಿದೆ. ತನಿಖೆ ಮುಗಿಯುವ ತನಕ ರಕ್ಷಣಾ ಸಚಿವ ಅಲ್-ಮಹದಿ ಅಲ್ ಬರ್ಘಟಿ ಹಾಗೂ ಥರ್ಡ್ ಫೋರ್ಸ್ ಮುಖ್ಯಸ್ಥರನ್ನು ವಜಾಗೊಳಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ.

ಲಿಬಿಯಾದ ಸರ್ವಾಧಿಕಾರಿ ಗದ್ದಾಫಿ 2011ರಲ್ಲಿ ಪದಚ್ಯುತಗೊಂಡ ನಂತರ ದೇಶದಲ್ಲಿ ಅರಾಜಕತೆಯ ವಾತಾವರಣವಿದೆ. ಲಿಬಿಯಾದ ಗವರ್ನ್ ಮೆಂಟ್ ಆಫ್ ನ್ಯಾಷನಲ್ ಎಕ್ಕಾರ್ಡ್ ಅಧಿಕಾರವನ್ನು ಎಲ್‌ಎನ್‌ಎ ಒಪ್ಪಿಕೊಳ್ಳಲು ಸಿದ್ಧವಿಲ್ಲದೇ ಇರುವುದರಿಂದ ಹೆಚ್ಚಿನ ಸಮಸ್ಯೆ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News