ಫುಟ್ಬಾಲ್ ಆಟಗಾರ ವಿನೀತ್‌ಗೆ ಕೇರಳ ಮುಖ್ಯಮಂತ್ರಿ ಬೆಂಬಲ

Update: 2017-05-21 18:33 GMT

ಹೊಸದಿಲ್ಲಿ, ಮೇ 21: ಕೇರಳ ಅಕೌಂಟೆಂಟ್ ಜನರಲ್ ಕಚೇರಿಯ ಲೆಕ್ಕ ಪರಿಶೋಧಕ ಹುದ್ದೆಯಿಂದ ವಜಾಗೊಳಿಸಲ್ಪಟ್ಟಿರುವ ಭಾರತದ ಫುಟ್ಬಾಲ್ ಆಟಗಾರ ಸಿ.ಕೆ. ವಿನೀತ್‌ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಬಲ ವ್ಯಕ್ತಪಡಿಸಿದ್ದು, ಇಂತಹ ಕ್ರಮ ಕ್ರೀಡಾಪಟುವಿನ ನೈತಿಕ ಸ್ಥೈರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ವಿನೀತ್ 2012ರಲ್ಲಿ ಕ್ರೀಡಾಕೋಟಾದಡಿಯಲ್ಲಿ ಅಕೌಂಟೆಂಟ್ ಜನರಲ್ ಆಫೀಸ್‌ನಲ್ಲಿ ಆಡಿಟರ್ ಆಗಿ ನೇಮಕಗೊಂಡಿದ್ದರು. ಹಾಜರಾತಿಯ ಕೊರತೆಯ ಹಿನ್ನೆಲೆಯಲ್ಲಿ ವಿನೀತ್‌ರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

‘‘ಕ್ರೀಡಾ ಸಚಿವರಾದ ವಿಜಯ್ ಗೊಯೆಲ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದನ್ನು ನಿರೀಕ್ಷಿಸುತ್ತಿದ್ದೇವೆ. ಒಂದು ವೇಳೆ ಕೇಂದ್ರ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯ ಸರಕಾರ ಅವರಿಗೆ ಸೂಕ್ತ ಹುದ್ದೆ ನೀಡಲು ತಯಾರಿ ನಡೆಸಲಿದೆ’’ ಎಂದು ವಿಜಯನ್ ಹೇಳಿದ್ದಾರೆ.

ಕೇರಳ ಕ್ರೀಡಾ ಸಚಿವರಾದ ಎ.ಸಿ.ಮೊದ್ದೀನ್ ಹಾಗೂ ರಾಜ್ಯ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ ಈಗಾಗಲೇ ಭಾರತದ ಕಂಟ್ರೊಲರ್ ಹಾಗೂ ಆಡಿಟರ್ ಜನರಲ್‌ಗೆ ಪತ್ರಬರೆದು ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News