×
Ad

​ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲೇಬೇಕು: ಕೆ.ಸಿ.ವೇಣುಗೋಪಾಲ್

Update: 2017-05-22 17:33 IST

ಬೆಂಗಳೂರು, ಮೇ 22: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕಾಗಿದೆ. ಆದುದರಿಂದ, ಪರಸ್ಪರ ಭಿನ್ನಾಭಿಪ್ರಾಯ ಬಿದಿಗಿಟ್ಟು ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಕಾರ್ಯಕ್ರಮಗಳನ್ನು ರೂಪಿಸುವಂತೆ ಸಚಿವರು, ಶಾಸಕರು ಹಾಗೂ ಮುಖಂಡರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚನೆ ನೀಡಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬೆಳಗಾವಿ ಕಂದಾಯ ವಿಭಾಗದ ಗದಗ, ಬಾಗಲಕೋಟೆ, ಬೆಳಗಾವಿ ನಗರ ಹಾಗೂ ಗ್ರಾಮಾಂತರ, ವಿಜಯಪುರ ಜಿಲ್ಲೆಗಳ ಸಚಿವರು, ಶಾಸಕರು ಹಾಗೂ ಪ್ರಮುಖ ಮುಖಂಡರ ಜೊತೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ರಾಜ್ಯ ಸರಕಾರದ ಜನಪ್ರಿಯ ಹಾಗೂ ಜನಪರವಾದ ಕಾರ್ಯಕ್ರಮಗಳು, ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಬೇಕು. ಆದುದರಿಂದ, ಈಗಿನಿಂದಲೆ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳು ವಂತೆ ಮುಖಂಡರಿಗೆ ಅವರು ತಾಕೀತು ಮಾಡಿದ್ದಾರೆ.

ಮೇಲ್ವರ್ಗದ ಅಸಮಾಧಾನ ದೂರ ಮಾಡಿ: ರಾಜ್ಯ ಸರಕಾರವನ್ನು ಅಹಿಂದ ವರ್ಗಗಳಿಗೆ ಸೀಮಿತವಾದದ್ದು ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದರಿಂದ ಮೇಲ್ವರ್ಗದವರು ಅಸಮಾಧಾನಗೊಂಡಿದ್ದಾರೆ. ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿದೆ ಎಂದು ಕೆಲ ಮುಖಂಡರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಚುನಾವಣಾ ವರ್ಷ ಇದಾಗಿರುವುದರಿಂದ ಸರಕಾರ ಎಲ್ಲ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಈ ವರ್ಗದ ಆಕ್ರೋಶವನ್ನು ಪಕ್ಷ ಎದುರಿಸಬೇಕಾಗುತ್ತದೆ. ಈಗಲೂ ಸಮಯವಿದೆ ಎಚ್ಚೆತ್ತುಕೊಂಡು ನಾವು ಮುಂದುವರೆಯಬೇಕಿದೆ ಎಂದು ಮುಖಂಡರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಐದು ದಿನಗಳ ಕಾಲ ಎಲ್ಲ ಜಿಲ್ಲೆಗಳ ಸಚಿವರು, ಶಾಸಕರು ಹಾಗೂ ಮುಖಂಡರೊಂದಿಗೆ ಸಮಾಲೋಚನಾ ಸಭೆಯನ್ನು ವೇಣುಗೋಪಾಲ್ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News