×
Ad

​ಸಹಕಾರಿ ಬ್ಯಾಂಕ್‌ಗಳು ಜನರ ನಿರೀಕ್ಷೆಗೆ ಸ್ಪಂದಿಸಬೇಕು: ಎಸ್.ಎಸ್.ಪಟ್ಟಣಶೆಟ್ಟಿ

Update: 2017-05-22 17:42 IST

ಬೆಂಗಳೂರು, ಮೇ 22: ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ, ಗ್ರಾಮೀಣ ಪ್ರದೇಶವನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸುವುದು ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಆದ್ಯ ಕರ್ತವ್ಯವಾಗಲಿ ಎಂದು ಸಹಕಾರ ಇಲಾಖೆಯ ಕಾರ್ಯದರ್ಶಿ ಎಸ್.ಎಸ್.ಪಟ್ಟಣ ಶೆಟ್ಟಿ ಆಶಿಸಿದರು.

ಸೋಮವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗಳ ವತಿಯಿಂದ ನಗರದ ಪ್ರಾದೇಶಿಕ ಆಡಳಿತ ಸಹಕಾರ ನಿರ್ವಹಣಾ ಸಂಸ್ಥೆಯಲ್ಲಿ ಸೌಹಾರ್ದ ಸಹಕಾರಿಗಳ ನಿರ್ದೇಶಕರುಗಳಿಗಾಗಿ ಆಯೋಜಿಸಿದ್ದ ‘ಆಡಳಿತ ಪರಿಣತಿ ಅಭಿವೃದ್ಧಿ ತರಬೇತಿ ಕಾರ್ಯಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಹಕಾರಿ ಸಂಸ್ಥೆಗಳಿಗೆ 113 ವರ್ಷಗಳ ಇತಿಹಾಸವಿದೆ. 30 ಕೋಟಿಗೂ ಹೆಚ್ಚು ಜನತೆ ಸಹಕಾರಿ ಸಂಸ್ಥೆಗಳ ವ್ಯಾಪ್ತಿಗೆ ಬರುತ್ತಾರೆ. ಇಂತಹ ಸಹಕಾರಿ ಸಂಸ್ಥೆಗಳ ಸಂಸ್ಥೆಗಳ ಮೇಲೆ ಸರಕಾರಗಳ ಹತೋಟಿ ಹೆಚ್ಚಿದ ಹಿನ್ನೆಲೆಯಲ್ಲಿ 2001ರಲ್ಲಿ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು. ಪ್ರಸ್ತುತ ರಾಜ್ಯದಲ್ಲಿ 4ಸಾವಿರ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದ ಮೇಲೆ ಗ್ರಾಮೀಣ ಪ್ರದೇಶದ ಜನತೆ ಸರ್ವತೋಮುಖವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತಿದೆ. ಜನತೆಯ ಆರ್ಥಿಕ ವ್ಯವಹಾರದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗಿದೆ. ಇಂತಹ ಜನಪರ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚಳವಾಗಲಿ ಎಂದು ಅವರು ಹೇಳಿದರು.

ಸೌಹಾರ್ದ ಸಂಯುಕ್ತ ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿ ಹಾಗೂ ನಿರ್ದೇಶಕರು ಸದಾ ಚಿಂತನಶೀಲರಾಗಿದ್ದು, ತ್ವರಿತಗತಿಯಲ್ಲಿ ಬದಲಾಗುತ್ತಿರುವ ಮಾಹಿತಿ ತಂತ್ರಜ್ಞಾನ ಹಾಗೂ ಸಹಕಾರಿ ಬ್ಯಾಂಕ್‌ಗಳ ನಿಯಮಗಳನ್ನು ಚೆನ್ನಾಗಿ ಅರಿತು ಕೊಂಡು ತಮ್ಮ ಸಂಸ್ಥೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಇದಕ್ಕೆ ಬೇಕಾದ ಅಗತ್ಯ ನೆರವನ್ನು ನೀಡಲು ಸಹಕಾರ ಇಲಾಖೆ ಸದಾ ಸಿದ್ಧವಿದೆ ಎಂದು ಅವರು ಹೇಳಿದರು.

ಸಹಕಾರ ಇಲಾಖೆಯ ಅಪರ ನಿಬಂಧಕ ಎಸ್.ಎನ್.ಅರುಣ್‌ ಕುಮಾರ್ ಮಾತನಾಡಿ, ದೇಶದಲ್ಲಿ ಸಹಕಾರಿ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ವಿಸ್ತರಣೆಗೊಂಡಿದ್ದು, ಪ್ರಜಾಸತ್ತಾತ್ಮಕವಾಗಿ ಬೆಳೆಸುವತ್ತ ಹೆಚ್ಚು ಒತ್ತು ಕೊಡಲಾಗುತ್ತಿದೆ. ಹೀಗಾಗಿ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳನ್ನು ನಿರ್ವಹಿಸುತ್ತಿರುವ ಆಡಳಿತ ಮಂಡಳಿ ಹಾಗೂ ನಿರ್ದೇಶಕರು ಹಣಕಾಸು ವ್ಯವಹಾರ ಕುರಿತ ನಿಯಮಗಳನ್ನು ಚೆನ್ನಾಗಿ ಅರಿಯಬೇಕೆಂದು ಆಶಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗಳ ಉಪಾಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಹೊಸತನ ಕೊಡುವ ನಿಟ್ಟಿನಲ್ಲಿ 2001ರಲ್ಲಿ ರಾಜ್ಯ ಸೌಹಾರ್ದ ಸಹಾಕಾರಿ ಬ್ಯಾಂಕ್‌ಗಳನ್ನು ಸ್ಥಾಪಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಸೌಹಾರ್ದ ಸಹಕಾರಿ ಬ್ಯಾಂಕ್ ಸಾಗಿ ಬಂದ ಹಾದಿಯ ಕುರಿತು ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ಅಭಿಮಾನಪಟ್ಟರು.

ಎರಡು ದಿನಗಳ ಕಾಲ ಆಯೋಜಿಸಿರುವ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರು ಭಾಗವಹಿಸಿದ್ದಾರೆ. ಈ ವೇಳೆ ಪ್ರಾದೇಶಿಕ ಆಡಳಿತ ಸಹಕಾರ ನಿರ್ವಹಣಾ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ವಸಂತ್ ನಾಯಕ್, ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News