‘ನೇಪಥ್ಯ ಕಲಾವಿದರಿಗೆ ಸಾಂಸ್ಥಿಕ ನೆಲೆ ಬೇಕಿದೆ’

Update: 2017-05-22 12:44 GMT

ಬೆಂಗಳೂರು, ಮೇ 22: ನೇಪಥ್ಯ ಕಲೆಯನ್ನು ದೃಶ್ಯ ಕಲೆಯೊಂದಿಗೆ ಸಮೀಕರಣ ಮಾಡುವ ಮೂಲಕ ನೇಪಥ್ಯ ಕಲಾವಿದರಿಗೆ ಸಾಂಸ್ಥಿಕ ನೆಲೆ ಕಲ್ಪಿಸಬೇಕಿದೆ ಎಂದು ರಾಜ್ಯ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸದಸ್ಯ ಜಯರಾಮರಾಜೇ ಅರಸ್ ಹೇಳಿದ್ದಾರೆ.

ನಗರದ ನಯನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಆಯೋಜಿಸಿದ್ದ ನೇಪಥ್ಯ ಕಲಾಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೈಪಥ್ಯ ಕಲಾವಿದರಿಂದಲ್ಲೇ ರಂಗ ಪ್ರಯೋಗಗಳಿಗೆ ಕಳೆ ಬರುತ್ತಿರುವುದು. ಆದರೆ ನೈಫಥ್ಯ ಕಲಾವಿದರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಯಕ್ಷಗಾನ ಮತ್ತು ನಾಟಕಕ್ಕೆ ವೌಲ್ಯವರ್ಧನೆ ನೀಡುವ ನೇಪಥ್ಯ ಕಲೆಯನ್ನು ದೃಶ್ಯ ಕಲೆಯೊಂದಿಗೆ ಸಮೀಕರಣ ಮಾಡುವ ಮೂಲಕ ಹೊಸ ಆಯಾಮ ನೀಡಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನೇಪಥ್ಯ ಕಲೆಯೂ ಬೆಳೆಯುತ್ತಿದೆ. ಅನೇಕ ಕಲಾವಿದರು ಹಲವು ವರ್ಷಗಳಿಂದ ಕಲೆಯನ್ನು ರಕ್ಷಣೆ ಮಾಡಿದ್ದಾರೆ. ದೇಶದಲ್ಲಿ ಇತರ ಕಲಾವಿದರು ರಾಷ್ಟ್ರೀಯ ಸನ್ಮಾನ, ಗೌರವಗಳಿಗೆ ಭಾಜನರಾಗುತ್ತಿದ್ದಾರೆ. ಆದರೆ ನೇಪಥ್ಯ ಕಲಾವಿದರು ಹೆಸರೇ ಹೇಳುವ ರೀತಿಯಲ್ಲಿ ಪ್ರಶಸ್ತಿ, ಸನ್ಮಾನಗಳಿಂದ ದೂರವೇ ಉಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎ.ದಯಾನಂದ ಮಾತನಾಡಿ, ಮೋಹಿನಿಯಾಟ್ಟಂ ಸೇರಿದಂತೆ ವೈಭವದ ಜನಪದ ಕಲೆಗಳನ್ನು ನೇಪಥ್ಯ ಕಲಾವಿದರು ಜೀವಂತವಾಗಿಟ್ಟಿದ್ದಾರೆ. ನೇಪಥ್ಯ ಕಲೆ ಕಲೆಗಳಲ್ಲಿ ಅದ್ಭುತ ಕಲೆ. ರಂಗ ಪ್ರಕಾರಗಳಿಗೆ ಗೌರವ, ಆಕರ್ಷಣೆ, ವೈಭೋಗ ತಂದುಕೊಡುವ ನೇಪಥ್ಯ ಕಲಾವಿದರೂ ತೆರೆಯ ಮರೆಯಲ್ಲಿ ಉಳಿದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್.ಮೂರ್ತಿ ಮಾತನಾಡಿ,ಕಿನ್ನಾಳ ಸೇರಿದಂತೆ ಅಳಿವಿನಂಚಿನಲ್ಲಿರುವ ಕಲೆಗಳನ್ನು ಸಂರಕ್ಷಿಸಬೇಕಿದೆ. ಈ ಕಲೆಗಳಲ್ಲಿ ನಿರತರಾಗಿರುವ ಕಲಾವಿದರಿಗೆ ಪ್ರೋತ್ಸಾಹ ಸಿಗಬೇಕಿದೆ. ಇಂತಹ ಕಮ್ಮಟಗಳಿಂದ ಅಪಾಯದ ಅಂಚಿನಲ್ಲಿರುವ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗತ್ತದೆ ಎಂದರು.

ಕಲಾಕ್ಷೇತ್ರದಲ್ಲಿ ನೇಪಥ್ಯ ಕಲೆಗೆ ‘ಅಧಿಕೃತ’ ಸ್ಥಾನ ಸಿಗಬೇಕಿದೆ. ದೃಶ್ಯ ಕಲಾವಿದರು ನೇಪಥ್ಯ ಕಲೆಯನ್ನು ಬಳಸಿಕೊಂಡರೆ ವೃತಿನಿರತ ಕಲಾವಿದರಾಗಬಹುದು ಎಂದು ಹೇಳಿದರು. ಮೂರು ದಿನಗಳ ಕಾಲ ನಡೆಯುವ ಕಮ್ಮಟದ ಪ್ರಯೋಜನವನ್ನು ಕಲಾವಿದರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News