ಸರಗಳ್ಳತನ ಪ್ರಕರಣ: ಪಲ್ಸರ್ ಬಾಬು ಬಂಧನ

Update: 2017-05-22 12:48 GMT

ಬೆಂಗಳೂರು, ಮೇ 22: ಬೈಕ್ ಬೋರ್ಡ್ ಬದಲಿಸಿ ನಗರದ ವಿವಿಧೆಡೆ ಸಂಚರಿಸಿ ಒಂಟಿ ಮಹಿಳೆಯರ ಸರ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, 17.70 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಗೊಟ್ಟಿಗೆರೆಯ ಹನುಮಾನ್‌ನಗರದ ಬಾಬು ಯಾನೆ ಪಲ್ಸರ್ ಬಾಬು (36) ಬಂಧಿತ ಆರೋಪಿ.

ಈತ ಚೆನ್ನಪಟ್ಟಣ ತಾಲೂಕಿನ ನಿವಾಸಿಯಾಗಿದ್ದು, ಗುಂಡ, ರಾಜೇಶ ಇನ್ನಿತರ ಹೆಸರುಗಳನ್ನಿಟ್ಟುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಕ್‌ಗಳ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಬಸವೇಶ್ವರನಗರ, ಕಾಟನ್‌ಪೇಟೆ, ಪುಟ್ಟೇನಹಳ್ಳಿ, ಕಲಾಸಿಪಾಳ್ಯ, ಕೋಣನಕುಂಟೆ, ಗಿರಿನಗರ, ಚಂದ್ರಲೇಔಟ್, ಮಲ್ಲೇಶ್ವರಂ, ಜಯನಗರ, ಕೋರಮಂಗಲ ಸೇರಿ ಹಲವಾರು ಕಡೆಗಳಲ್ಲಿ ಸಂಚರಿಸಿ, ಒಂಟಿಯಾಗಿ ಓಡಾಡುವ ಮಹಿಳೆಯರ ಸರವನ್ನು ಕಿತ್ತು ಪರಾರಿಯಾಗುತ್ತಿದ್ದ. ಆರೋಪಿಯು ವೃತ್ತಿಪರ ಸರಗಳ್ಳನಾಗಿದ್ದು, ಉಪ್ಪಾರಪೇಟೆಯಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 15ಕ್ಕೂ ಅಧಿಕ ಸರಗಳ್ಳತನ ಪ್ರಕರಣ ಪತ್ತೆಯಾಗಿದ್ದು, ಈತನ ವಶದಲ್ಲಿದ್ದ 610 ಗ್ರಾಂ ತೂಕದ 15 ಸರಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News