​​ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡವರಿಗೂ ಸಾಲ ಸೌಲಭ್ಯ ಸಿಗಲಿ: ಮೇಯರ್‌

Update: 2017-05-22 12:52 GMT

ಬೆಂಗಳೂರು, ಮೇ 22: ರಾಷ್ಟ್ರೀಕೃತ ಮತ್ತು ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಬಡವರ್ಗದ ಜನರಿಗೆ ಸಾಲ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ತಿಳಿಸಿದ್ದಾರೆ.

ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಉದ್ಯೋಗಿಗಳೊಡನೆ ರಾಜ್ಯಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಕೃತ ಮತ್ತು ಶೆಡ್ಯೂಲ್ಡ್ ಬ್ಯಾಂಕ್‌ಗಳು ಕೇವಲ ಶ್ರೀಮಂತರಿಗೆ ಮಾತ್ರ ಸಾಲ ಸೌಲಭ್ಯಗಳನ್ನು ಕಲ್ಪಿಸುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಬಡ ಮತ್ತು ಕೆಳ ವರ್ಗದ ಮಹಿಳೆಯರಿಗೆ ಮಾಹಿತಿ ಕೊರತೆಯಿಂದ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಗಳು ದೊರಕುತ್ತಿಲ್ಲ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಗಮನ ಹರಿಸಬೇಕು. ಅರ್ಹ ಫಲಾನುಭವಿಗಳಿಗೆ ಸರಕಾರದ ಸಾಲ ಯೋಜನೆಗಳು ಸಪರ್ಮಕವಾಗಿ ತಲುಪಿಸಲು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
 

ಕಾಸಿಯಾ, ಕರ್ನಾಟಕ ರಾಜ್ಯ ಹಣಕಾಸು ನಿಗಮ ಮತ್ತು ಮಹಿಳಾ ಅಭಿವೃದ್ಧಿ ನಿಗಮಗಳು ಸಾಲ ಸೌಲಭ್ಯ ನೀಡುವಾಗ ಅರ್ಹರನ್ನು ಗುರುತಿಸಬೇಕು. ಸಾಲಕ್ಕಾಗಿ ಬಯಸಿ ಅರ್ಜಿ ಹಾಕುವ ಬಡ ಮಹಿಳೆಯರಿಗೆ ಅಗತ್ಯ ಮಾಹಿತಿಯ ನೆರವು ನೀಡಬೇಕು ಎಂದು ಹೇಳಿದರು. ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News