​ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮೇ 25 ರಂದು ಹಗಲು-ರಾತ್ರಿ ಧರಣಿ

Update: 2017-05-22 12:57 GMT

ಬೆಂಗಳೂರು, ಮೇ 22: ಹೈವಾ ಇಂಡಿಯಾ ಆಡಳಿತ ವರ್ಗದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕರ್ನಾಟಕ ವರ್ಕರ್ಸ್‌ ಯೂನಿಯನ್ ನೇತೃತ್ವದಲ್ಲಿ ಮೇ 25 ರಂದು ನಗರದ ಕಾರ್ಮಿಕ ಆಯುಕ್ತರ ಕಚೇರಿ ಎದುರು ಹಗಲು-ರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಯೂನಿಯನ್ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್.ರಾಜನ್ ತಿಳಿಸಿದ್ದಾರೆ.

ನಗರದ ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿರುವ ಹೈವಾ ಇಂಡಿಯಾ ಎಂಬ ಅಂತಾರಾಷ್ಟ್ರೀಯ ಕಂಪೆನಿಯು ಕಾರ್ಮಿಕ ಇಲಾಖೆಯಿಂದ ಲೋಡಿಂಗ್- ಅನ್‌ಲೋಡಿಂಗ್, ಹೌಸ್‌ಕೀಪಿಂಗ್, ಸೆಕ್ಯುರಿಟಿಗಳಾಗಿ ನೇಮಕ ಮಾಡಿಕೊಳ್ಳಲು ಪರವಾನಿಗೆ ಪಡೆದು, ಈ ಗುತ್ತಿಗೆ ಕಾರ್ಮಿಕರಿಂದ ಕಾನೂನು ಬಾಹಿರವಾಗಿ ಉತ್ಪಾದನಾ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾರ್ಖಾನೆಯಲ್ಲಿ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದಂತೆ ಆಡಳಿತ ವರ್ಗ ಹಾಗೂ ಕಾರ್ಮಿಕ ಸಂಘದ ನಡುವೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾನೂನು ರೀತಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದನ್ನು ಆಡಳಿತ ವರ್ಗ ಸಂಪೂರ್ಣವಾಗಿ ಜಾರಿ ಮಾಡಿಲ್ಲ. ಅಲ್ಲದೆ, ಇದನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿನ ಕಾರ್ಮಿಕ ಮುಖಂಡರು ಸೇರಿದಂತೆ 21 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂದು ಅವರು ದೂರಿದರು.

ಕಂಪೆನಿ ಆಡಳಿತ ವರ್ಗದ ಕ್ರಮ ಖಂಡಿಸಿ ಕಳೆದ 2 ತಿಂಗಳಿಂದ ಮುಷ್ಕರ, ಪ್ರತಿಭಟನೆ ನಡೆಸುತ್ತಿದ್ದರೂ ಯಾರು ಇದರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಇದೇ ವೇಳೆ ಕಂಪೆನಿಯು ಅಕ್ರಮವಾಗಿ ಮುಂಬೈ, ಪೂನಾ ಹಾಗೂ ಉತ್ತರ ಭಾರತದ ನೂರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಉತ್ಪಾದನೆ ಕೆಲಸ ನಡೆಸುತ್ತಿದೆ. ಕಾರ್ಖಾನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕಾರ್ಮಿಕರ ನೆಪದಲ್ಲಿ ಇವರನ್ನು ಕಾರ್ಖಾನೆಯಲ್ಲಿ ಇರಿಸಿಕೊಳ್ಳಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಕೂಡಲೇ ಸರಕಾರ ಮತ್ತು ಕಾರ್ಮಿಕ ಇಲಾಖೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಹೈವಾ ಕಾರ್ಖಾನೆಯ ಆಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ, ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ನೀಡಿರುವ ಪರವಾನಿಗೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News