ಜಾರಕಿಹೊಳಿ ಸಹೋದರರ ವಿರುದ್ಧ ಮುಖ್ಯಮಂತ್ರಿ ಗರಂ

Update: 2017-05-22 15:33 GMT

ಬೆಂಗಳೂರು, ಮೇ 22: ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ವೈಮನಸ್ಸಿನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮಿಬ್ಬರ ನಡುವಿನ ಭಿನ್ನಮತದಿಂದ ಬೇಸತ್ತು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ನಿಮಗೂ ಹಾಗೂ ಪಕ್ಷಕ್ಕೂ ನಷ್ಟವಾಗಲಿದೆ ಎಂದು ವೇಣುಗೋಪಾಲ್ ಸಮ್ಮುಖದಲ್ಲೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಪ್ರತ್ಯೇಕ ಚರ್ಚೆ: ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಪ್ರಮುಖ ಮುಖಂಡರ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ವೇಣುಗೋಪಾಲ್ ಯತ್ನಿಸಿದ್ದು, ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಕಚೇರಿ ಯಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ಇಬ್ಬರು ಸಹೋದರರ ನಡುವಿನ ಭಿನ್ನಾಭಿಪ್ರಾಯಕ್ಕೆ ಇರುವ ಕಾರಣಗಳು, ಇತ್ತೀಚೆಗೆ ಪಕ್ಷ ಬಿಡುವ ಕುರಿತು ಸತೀಶ್ ಜಾರಕಿಹೊಳಿ ಹಾಕಿದ್ದ ಬೆದರಿಕೆ, ಸತೀಶ್ ಹಾಗೂ ಲಕ್ಷ್ಮೀಹೆಬ್ಬಾಳ್ಕರ್ ನಡುವಿನ ಸಂಘರ್ಷದ ಕುರಿತು ಉಭಯ ಮುಖಂಡರ ಜೊತೆ ವೇಣುಗೋಪಾಲ್ ಸಮಾಲೋಚನೆ ನಡೆಸಿದರು.

ನಿಮ್ಮಿಬ್ಬರ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಭಿನ್ನಾಭಿಪ್ರಾಯಗಳು ಉಂಟಾಗಿದೆ. ಸಮಸ್ಯೆಯನ್ನು ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗುವಂತೆ ವೇಣುಗೋಪಾಲ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News