ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಪುನೀತ್, ದಾಮೋದರ್ ರನ್ನು ರಕ್ಷಿಸಿದ ಐಎಸ್ ಎಫ್: ಶೀಘ್ರ ತವರಿಗೆ ಮರಳುವ ನಿರೀಕ್ಷೆ

Update: 2017-05-23 12:22 GMT

ರಿಯಾದ್, ಮೇ 23: ಕೆಲವು ತಿಂಗಳ ಹಿಂದೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಸಂಕಷ್ಟಕ್ಕೀಡಾಗಿ, ಕಂಗಾಲಾಗಿದ್ದ ಕರಾವಳಿಯ ಇಬ್ಬರು ಯುವಕರನ್ನುಇಂಡಿಯನ್ ಸೋಶಿಯಲ್ ಫೋರಮ್ ರಕ್ಷಿಸಿದ್ದು, ಯುವಕರು ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಇಂಡಿಯನ್ ಸೋಶಿಯಲ್ ಫೋರಮ್ ಅಲ್ ಗಸೀಮ್ ಘಟಕವು ಮುಲ್ಕಿ ಕಾರ್ನಾಡಿನ ಪುನೀತ್ ಮತ್ತು ಗಂಜಿಮಠ ನಿವಾಸಿ ದಾಮೋದರ ಎಂಬವರನ್ನು ಮರಳಿ ತಾಯ್ನಾಡಿಗೆ ಕಳುಹಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಸೌದಿಯಲ್ಲಿ ಸಂಕಷ್ಟಕ್ಕೀಡಾಗಿದ ಯುವಕರನ್ನು ರಕ್ಷಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೇಲೂ ಒತ್ತಡ ಹೇರಲಾಗಿತ್ತು. ಯುವಕರನ್ನು ಐಎಫ್ ಎಸ್ ತಂಡವು ರಕ್ಷಿಸಿದ್ದು, ಸೌದಿಯಿಂದ ಯುವಕರು ಇನ್ನಷ್ಟೇ ಮರಳಲಿದ್ದಾರೆ.

2016 ರ ಡಿಸೆಂಬರ್‌ನಲ್ಲಿ ಪುನೀತ್ ಮತ್ತು ದಾಮೋದರ್ ಮಂಗಳೂರಿನ ಏಜೆನ್ಸಿ ಯೊಂದರ ಮೂಲಕ ಪೈಂಟರ್ ವೃತ್ತಿಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ತೀರಾ ಬಡಕುಟುಂಬದ ಈ ಇಬ್ಬರು ಯುವಕರನ್ನು ಕೈತುಂಬಾ ಸಂಬಳದ ನಿರೀಕ್ಷೆಯೊಂದಿಗೆ ಪೈಂಟರ್ ಕೆಲಸಕ್ಕೆಂದು ಸೌದಿ ಅರೇಬಿಯಾದ ಬುರೈದಾ ಎಂಬ ಸ್ಥಳಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಅಲ್ಲಿ ಅವರನ್ನು ಕುರಿ ಮೇಯಿಸುವ (ಮಝ್ರ) ಕೆಲಸಕ್ಕೆ ನಿಯೋಜಿಸಿ ಸುಡು ಬಿಸಿಲಿನ ಮರುಭೂಮಿಗೆ ಕಳುಹಿಸಲಾಗಿತ್ತು. ಯಾವುದೇ ಜನ ಸಂಪರ್ಕವಿಲ್ಲದ ಮರುಭೂಮಿಯಲ್ಲಿ ಕೆಲವು ತಿಂಗಳ ವರೆಗೆ ದುಡಿದ ಇವರಿಗೆ ಪ್ರಾಯೋಜಕರು ಸಂಬಳವನ್ನೂ ನೀಡಿರಲಿಲ್ಲ. ದಿಕ್ಕು ಕಾಣದಾದ ಯುವಕರು ತಮ್ಮ ಸಂಕಷ್ಟವನ್ನು ಯಾರ ಬಳಿಯೂ ಹೇಳಿ ಕೊಳ್ಳಲಾಗದೆ ಕಂಗಾಲಾಗಿದ್ದರು. ಮನೆಯವರು ತಮ್ಮ ಮಕ್ಕಳಿಗಾದ ಸ್ಥಿತಿಯನ್ನು ವಿದೇಶಾಂಗ ಸಚಿವಾಲಯಕ್ಕೂ ತಿಳಿಸಿದ್ದರು. ಈ ಕುರಿತು ಸಚಿವಾಲಯದ ವೆಬ್‌ಸೈಟ್ ' ಮದದ್' ನಲ್ಲಿ ದೂರು ದಾಖಲಾಗಿದೆ.

ಐದಾರು ತಿಂಗಳಿನಿಂದ ಯಾವುದೇ ಪರಿಹಾರ ಕಾಣದಾದಾಗ ಸೋಶಿಯಲ್ ಮೀಡಿಯಾದ ಮುಖಾಂತರ ವಿವಿಧ ಪತ್ರಿಕೆ ಮತ್ತು ಚಾನೆಲ್'ಗಳಿಗೂ ವಿವರ ತಿಳಿಸಿದ ಪುನೀತ್ ಮತ್ತು ದಾಮೋದರ್ ಕುಟುಂಬದವರು ನೆರವಿಗಾಗಿ ಯಾಚಿಸಿದರು. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ನು ಗಮನಿಸಿದ ಇಂಡಿಯನ್ ಸೋಶಿಯಲ್ ಫೋರಮ್ ತಂಡವು ಯುವಕರು ಇರುವ ಸ್ಥಳವನ್ನು ತಲುಪಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. 
ಭಾರತೀಯ ರಾಯಭಾರ ಕಛೇರಿಗೆ ಪ್ರಕರಣದ ಸಂಪೂರ್ಣ ವಿವರವನ್ನು ನೀಡಿದ ಅಯ್ಯೂಬ್ ಕಾಟಿಪಳ್ಳ ನೇತೃತ್ವದ ರವೂಫ್ ಕಳಾಯಿ, ರಶೀದ್ ಉಚ್ಚಿಲ ಅವರನ್ನೊಳಗೊಂಡ ಇಂಡಿಯನ್ ಸೋಶಿಯಲ್ ಫೋರಮ್ ಅಲ್ ಗಸೀಮ್ ನಿಯೋಗವು ರಾಯಭಾರಿ ಕಚೇರಿಯಿಂದ ಈ ಬಗ್ಗೆ ಮುಂದುವರೆಯಲು ಅಧಿಕೃತ ಮಾನ್ಯತೆ ಪತ್ರವನ್ನು ಪಡೆದು ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News