ರೋಟಿಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ!

Update: 2017-05-23 06:21 GMT

ಹೊಸದಿಲ್ಲಿ, ಮೇ 23: ರೋಟಿಯ ವಿಷಯದಲ್ಲಿ ನಡೆದ ಜಗಳವೊಂದರಲ್ಲಿ ಹೊಟೇಲಿನ ಕೆಲಸಗಾರರು ಗ್ರಾಹಕನೋರ್ವನನ್ನು ಹೊಡೆದು ಕೊಂದ ಘಟನೆ ಇಲ್ಲಿನ ದರ್ಯಾಗಂಜ್ ಎಂಬಲ್ಲಿ ನಡೆದಿದೆ.

ಯಶ್ ಬಹದ್ದೂರ್ ಎಂಬ ವ್ಯಕ್ತಿ ಹೊಟೇಲಿನವರು 4 ರೋಟಿಯ ಬದಲಾಗಿ 2 ರೋಟಿ ನೀಡಿದ್ದರಿಂದ ಇದನ್ನು ಪ್ರಶ್ನಿಸಿದ್ದು, ನಂತರ ಹಣ ನೀಡಲು ನಿರಾಕರಿಸಿದ್ದ. ಇದರಿಂದ ಆರಂಭವಾದ ವಾಗ್ವಾದ ಕೊಲೆಯಲ್ಲ ಅಂತ್ಯಗೊಂಡಿದೆ. 

ನೇಪಾಳದಿಂದ 20 ವರ್ಷಗಳ ಹಿಂದೆ ದೆಹಲಿಗೆ ಬಂದಿದ್ದ ಬಹದ್ದೂರ್ ನೇತಾಜಿ ಸುಭಾಷ್ ಮಾರ್ಗದ ಇಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದೊಂದಿಗೆ ಚಾಂದ್ ನಿ ಚೌಕ್ ಬಳಿ ನೆಲೆಸಿದ್ದ, ಗೆಳೆಯರೊಂದಿಗೆ ಮದ್ಯಪಾನ ಮಾಡಿದ ನಂತರ ಬಹದ್ದೂರ್ ಸಮೀಪದ ಹೊಟೇಲೊಂದಕ್ಕೆ ತೆರಳಿದ್ದ. ಹೊಟೇಲಿನಲ್ಲಿ 2 ರೋಟಿ ನೀಡಿದಾಗ ಇನ್ನೂ ಎರಡು ರೋಟಿ ನೀಡುವಂತೆ ಬಹದ್ದೂರ್ ಹೇಳಿದ್ದು, ಈ ಸಂದರ್ಭ ವೈಟರ್ ಸ್ವಲ್ಪ ಕಾಯುವಂತೆ ತಿಳಿಸಿದ್ದು, ಇದೇ ಕಾರಣಕ್ಕೆ ವಾಗ್ವಾದ ಆರಂಭವಾಗಿತ್ತು.

ಮಾತಿಕ ಚಕಮಕಿ ತೀವ್ರಗೊಂಡು ಲೋತನ್ ಹಾಗೂ ಮನೋಜ್ ಎಂಬ ಕೆಲಸಗಾರರು ಬಹದ್ದೂರ್ ಗೆ ಥಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡ ಬಹದ್ದೂರ್ ಕುಸಿದು ಬಿದ್ದಿದ್ದು, ಹೋಟೆಲ್ ಮಾಲಕ ಹಾಗೂ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು. 

ಆಸ್ಪತ್ರೆಗೆ ದಾಖಲಾಗಿದ್ದ ಬಹದ್ದೂರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News