ದೇಶದ್ರೋಹ ಕಾರ್ಯದಲ್ಲಿ ಶಾಸಕ ಭೈರತಿ ಬಸವರಾಜ್: ಎನ್.ಆರ್.ರಮೇಶ್
ಬೆಂಗಳೂರು, ಮೇ 24: ನಗರದ ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೈರತಿ ಬಸವರಾಜ್ ಅವರು ಬಾಂಗ್ಲಾದೇಶದ ಸಾವಿರಾರು ನಾಗರಿಕರಿಗೆ ಭಾರತೀಯ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ ದೇಶದ್ರೋಹ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಬುಧವಾರ ನಗರದ ಶೇಷಾದ್ರಿಪುರಂ ರಸ್ತೆಯಲ್ಲಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 19 ಸಾವಿರಕ್ಕೂ ಹೆಚ್ಚು ಅಧಿಕ ನಕಲಿ ಮತದಾರರನ್ನು ಸೇರ್ಪಡೆಗೊಳಿಸಿರುವ ಬಗ್ಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೆ.ಆರ್‌ಪುರ ಕ್ಷೇತ್ರದ ವ್ಯಾಪ್ತಿಯ ಒಂಭತ್ತು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೇವಲ ಒಂದು ವರ್ಷದಲ್ಲಿಯೇ 19 ಸಾವಿರಕ್ಕೂ ಹೆಚ್ಚು ಹೊಸ ನಕಲಿ ಮತದಾರರನ್ನು ಹುಟ್ಟು ಹಾಕಲಾಗಿದೆ. ಅಲ್ಲದೆ, ಇದರಲ್ಲಿ ಶೇಕಡ 75 ಕ್ಕೂ ಹೆಚ್ಚು ಮತದಾರರು ಈ ಕ್ಷೇತ್ರಕ್ಕೆ ಸಂಬಂಧವೇ ಇಲ್ಲ. ಇನ್ನು ತಮಿಳುನಾಡು, ಆಂಧ್ರಪ್ರದೇಶದ ಗಡಿ ಪ್ರದೇಶಗಳ ನಾಗರಿಕರಿಗೂ ಕಾನೂನು ಬಾಹಿರವಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ದೂರಿದರು.
87ನೆ ವಾರ್ಡ್‌ನ ಕಂದಾಯ ಪರಿವೀಕ್ಷಕರು, ವಸೂಲಿಗಾರರು, ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಈ ಒಂಭತ್ತು ವಾರ್ಡ್‌ಗಳಲ್ಲಿ ಕಂದಾಯ ಪರಿವೀಕ್ಷಕರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣಕ ಯಂತ್ರ ನಿರ್ವಾಹಕರುಗಳು ಶಾಸಕ ಭೈರತಿ ಬಸವರಾಜ್ ಅವರೊಂದಿಗೆ ಶಾಮೀಲಾಗಿ ಕಾನೂನು ಬಾಹಿರವಾಗಿ ನಕಲಿ ಮತದಾರರ ಸೇರ್ಪಡೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್.ಆರ್.ರಮೇಶ್ ಹೇಳಿದರು.
ಕಾನೂನು ಬಾಹಿರ ಕಾರ್ಯದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಹಾಗೂ ಶಾಸಕ ಭೈರತಿ ಬಸವರಾಜ್ ಅವರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ನಕಲಿ ಮತದಾರರನ್ನು ಅಧಿಕೃತ ಪಟ್ಟಿಯಿಂದ ಕೈಬಿಡಬೇಕೆಂದು ಒತ್ತಾಯಿಸಿದರು.