×
Ad

ಕರಾವಳಿ ಕಾಂಗ್ರೆಸ್ ನಾಯಕರ ವಿರುದ್ಧ ವೇಣುಗೋಪಾಲ್ ಅಸಮಾಧಾನ

Update: 2017-05-24 19:26 IST

ಬೆಂಗಳೂರು, ಮೇ 24: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಜಿಲ್ಲೆಯ ನಾಯಕರು ವಿಫಲರಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳ ಮುಖಂಡರು, ಸಚಿವರು, ಶಾಸಕರ ಸಮಾಲೋಚನಾ ಸಭೆಯಲ್ಲಿ ವೇಣುಗೋಪಾಲ್ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವರ್ಧಿಸಬೇಕಾಗಿದೆ. ಬಿಜೆಪಿಯವರ ಪಾಲಿಗೆ ಕರಾವಳಿ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. ಯಾವುದೆ ಚುನಾವಣೆಯಿದ್ದರೂ ಬಿಜೆಪಿಯವರಿಗೆ ಹೆಚ್ಚಿನ ಸ್ಥಾನಗಳು ಸಿಗುತ್ತಿವೆ. ಇನ್ನೊಂದು ವರ್ಷದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗಲಿರುವುದರಿಂದ ಪಕ್ಷ ಸಂಘಟನೆಯನ್ನು ಮುಖಂಡರು ಚುರುಕುಗೊಳಿಸಬೇಕು ಎಂದು ವೇಣುಗೋಪಾಲ್ ಸೂಚನೆ ನೀಡಿದ್ದಾರೆ.

ಎರಡು ಜಿಲ್ಲೆಗಳ ಶಾಸಕರು ತಮ್ಮ ತಮ್ಮ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಜಿಲ್ಲಾ ಮಟ್ಟದಲ್ಲಿ ಪಕ್ಷದ ಯಾವುದೆ ಸಮಸ್ಯೆಗಳಿದ್ದರೂ ಅದನ್ನು ಬಹಿರಂಗವಾಗಿ, ಮಾಧ್ಯಮಗಳ ಎದುರು ಹೇಳಿಕೆಗಳನ್ನು ನೀಡಬಾರದು. ಎಲ್ಲವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರ ವಿರುದ್ಧ ವೇಣುಗೋಪಾಲ್ ತಮ್ಮ ಅಸಮಾಧಾನ ಹೊರಹಾಕುತ್ತಿದ್ದರೂ, ಯಾರೊಬ್ಬರೂ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೆಸರನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ತಿಳಿದು ಬಂದಿದೆ. ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರಂತರವಾಗಿ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವ ಜನಾರ್ದನ ಪೂಜಾರಿ ವಿಚಾರವು ಸಭೆಯಲ್ಲಿ ಪ್ರಸ್ತಾಪವಾಗದಂತೆ ಮಂಗಳೂರು ಭಾಗದ ಎಲ್ಲ ಮುಖಂಡರು ಮೊದಲೆ ನಿರ್ಧರಿಸಿದ್ದರು ಎನ್ನಲಾಗಿದೆ.

 ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮರ್ಥ್ಯ ಹೆಚ್ಚಿದೆ. ಆದರೂ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಕ್ಷೇತ್ರದಲ್ಲಿ ಬಿಜೆಪಿಯ ಮತಗಳಿಕೆ ಸಾಮರ್ಥ್ಯ ಹೆಚ್ಚುತ್ತಿದೆ. ಮುಂದಿನ ಚುನಾವಣೆಯು ನಮಗೆ ಸವಾಲು ತಂದಿಡಬಹುದು. ಆದುದರಿಂದ, ಈಗಿನಿಂದಲೆ ಪಕ್ಷದ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ಜಿಲ್ಲಾ ನಾಯಕರು ಆದ್ಯತೆ ನೀಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಸಮಾಲೋಚನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಎಐಸಿಸಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಎಡವಿದ ಮುಖ್ಯಮಂತ್ರಿ

ಕೆಪಿಸಿಸಿ ಕಚೇರಿಯ ಮೆಟ್ಟಿಲುಗಳನ್ನು ಹತ್ತುವ ಸಂದರ್ಭದಲ್ಲಿ ಪಂಚೆ ಕಾಲಿನಡಿಯಲ್ಲಿ ಸಿಕ್ಕಿಕೊಂಡ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಡವಿದರು. ಕೂಡಲೆ ಅವರ ಪಕ್ಕದಲ್ಲಿದ್ದ ಸಚಿವ ರೋಷನ್‌ಬೇಗ್ ಸೇರಿದಂತೆ ಇನ್ನಿತರರು ಮುಖ್ಯಮಂತ್ರಿಯ ನೆರವಿಗೆ ಧಾವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News