×
Ad

ಧ್ವಜದ ವಿಚಾರಕ್ಕೆ ಅಯೂಬ್ ಖಾನ್ ಕೊಲೆ: ಏಳು ಮಂದಿ ಸೆರೆ

Update: 2017-05-24 20:54 IST

ಬೆಂಗಳೂರು, ಮೇ 24: ಕೊತ್ತನೂರು ಅಯೂಬ್ ಖಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿಯನ್ನು ಈಶಾನ್ಯ ವಿಭಾಗ ಪೊಲೀಸರು ಬಂಧಿಸಿದ್ದು, ಕರ್ನಾಟಕ ಸಂಘಟನೆಯೊಂದರ ಫಲಕ ಹಾಗೂ ಧ್ವಜ ಹಾಕಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆದಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಬಂಧಿತ ಆರೋಪಿಗಳನ್ನು ಯಲಹಂಕ 1ನೆ ಮುಖ್ಯ ರಸ್ತೆಯ ಶರೀಫ್ (33), ಮೆಹಬೂಬ್ ಪಾಶ (29), ಶಾರೂಕ್‌ ಖಾನ್ (24), ಮನ್ಸೂರ್ ಆಲಿ (30), ಹುಸೇನ್ (34), ನವಾಝ್ (19) ಹಾಗೂ ಅಹ್ಮದ್ (35) ಎಂದು ಪೊಲೀಸರು ಗುರುತಿಸಿದ್ದಾರೆ.

ಘಟನೆ ವಿವರ: ಆರೋಪಿ ಶರೀಫ್, ನಗರದ ಬೆಳ್ಳಳ್ಳಿ ಬಸ್ ನಿಲ್ದಾಣದ ಬಳಿ ಕರ್ನಾಟಕ ಸಂಘಟನೆಯೊಂದರ ನಾಮಫಲಕ ಹಾಗೂ ಧ್ವಜ ಹಾಕಿದ್ದ. ಇದನ್ನು ತೆಗೆಯುವಂತೆ ಕೊಲೆಯಾಗಿರುವ ಗೋವಿಂದಪುರದ ಅಯೂಬ್ ಖಾನ್ ಬೆದರಿಕೆ ಹಾಕಿದ್ದನು. ಇದರಿಂದ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಜಗಳವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನೆಪ ಮಾಡಿ ಅಯೂಬ್ ಖಾನ್‌ನನ್ನು ಮೇ 20 ರಂದು ಬೆಳ್ಳಳ್ಳಿ ಹೊರವಲಯದ ಜಮೀನೊಂದಕ್ಕೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊತ್ತನೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇವರ ವಶದಲ್ಲಿದ್ದ ಬೈಕ್, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಇಲ್ಲಿನ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News