ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸತೀಶ್ ಕುಮಾರ್ ನೇಮಕಕ್ಕೆ ತಡೆ

Update: 2017-05-26 09:54 GMT
ಎನ್.ಸತೀಶ್ ಕುಮಾರ್

ಮಂಗಳೂರು, ಮೇ 26: ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಎನ್.ಸತೀಶ್ ಕುಮಾರ್ ಅವರನ್ನು ನೇಮಕಗೊಳಿಸಿ ಗುರುವಾರ ಹೊರಡಿಸಿದ್ದ ಆದೇಶವನ್ನು ತಡೆ ಹಿಡಿಯಲಾಗಿದೆ ಎಂದು ಸರಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಎನ್.ಸತೀಶ್ ಕುಮಾರ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಿಸಿ ಆದೇಶ ಹೊರಬಿದ್ದ ಬೆನ್ನಿಗೇ ದ.ಕ. ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈ ಬಗ್ಗೆ ‘ವಾರ್ತಾಭಾರತಿ’ ಪ್ರಥಮವಾಗಿ ವರದಿ ಮಾಡಿತ್ತು. ಇದೀಗ ಸತೀಶ್ ಅವರ ನೇಮಕವನ್ನು ಸರಕಾರ ರದ್ದುಗೊಳಿಸಿದ್ದು, ಈ ಕುರಿತು ಅಧಿಕೃತ ಪ್ರಕಟನೆ ಇನ್ನಷ್ಟೇ ಹೊರಬೀಳಬೇಕಿದೆ.

ಈ ಹಿಂದೆ ದ.ಕ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸತೀಶ್ ಕುಮಾರ್ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯ ಬಗ್ಗೆ ಜನರಲ್ಲಿ ದೂರುಗಳಿದ್ದವು. ದೇಶ, ವಿದೇಶಗಳಲ್ಲಿ ಮಂಗಳೂರಿಗೆ ಕೆಟ್ಟ ಹೆಸರು ತಂದ ಚರ್ಚ್ ದಾಳಿ ಪ್ರಕರಣ ಹಾಗೂ ಅದರ ಬೆನ್ನಿಗೇ ಚರ್ಚ್‌ನಲ್ಲಿ ಪ್ರಾರ್ಥನಾನಿರತರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಗಳು ಇವರ ಅವಧಿಯಲ್ಲೇ ನಡೆದಿದ್ದವು. ಈ ಕಾರಣಕ್ಕೆ ಆ ಸಂದರ್ಭದಲ್ಲೇ ಅವರ ಕಾರ್ಯ ವೈಖರಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈಗ ಚುನಾವಣಾ ವರ್ಷದಲ್ಲಿ ಮತ್ತೆ ಮಂಗಳೂರು ಆಯುಕ್ತರ ಮಹತ್ವದ ಹುದ್ದೆಗ ಅವರನ್ನು ನೇಮಿಸುವುದರಿಂದ ನಗರದಲ್ಲಿ ಹಾಗೂ ಆ ಮೂಲಕ ಜಿಲ್ಲೆಯಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರು ಅಸಮಾಧಾನಕ್ಕೆ ಕಾರಣ. ಈ ಬಗ್ಗೆ ಸಚಿವ ಯು.ಟಿ.ಖಾದರ್ ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ದೂರಿದ್ದರೆನ್ನಲಾಗಿದೆ.

ಸಚಿವರ, ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ ಇದೀಗ ಸತೀಶ್ ಕುಮಾರ್ ಅವರನ್ನು ಮಂಗಳೂರು ನಗರ ಆಯುಕ್ತರನ್ನಾಗಿ ಹೊರಡಿಸಿದ್ದ ಆದೇಶವನ್ನು ಸರಕಾರ ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News