ಚಾಂಪಿಯನ್ಸ್ ಟ್ರೋಫಿ: ದಕ್ಷಿಣ ಆಫ್ರಿಕ ಚೊಚ್ಚಲ ಚಾಂಪಿಯನ್

Update: 2017-05-26 18:41 GMT

ಢಾಕಾ, ಮೇ 26: ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಬಾಂಗ್ಲಾದೇಶದಲ್ಲಿ 1998 ಅ.24ರಿಂದ ನ.1ರ ತನಕ ನಡೆಯಿತು.ಮಿನಿ ವಿಶ್ವಕಪ್ ಎಂದೇ ಹೆಸರಾಗಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕ ತಂಡ ಚೊಚ್ಚಲ ಚಾಂಪಿಯನ್ ಆಗಿತ್ತು..
ನ.1ರಂದು ಬಂಗಬಂಧು ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕ 4 ವಿಕೆಟ್‌ಗಳ ಜಯ ಗಳಿಸಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿತ್ತು.
ಗೆಲುವಿಗೆ 246 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ ಇನ್ನೂ 18 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟದಲ್ಲಿ 248 ರನ್ ಗಳಿಸಿ ಗೆಲುವಿನ ದಡ ಸೇರಿತ್ತು. ಆಲ್‌ರೌಂಡರ್ ಜಾಕ್ ಕಾಲಿಸ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ಆರಂಭಿಕ ದಾಂಡಿಗ ಫಿಲೋ ವ್ಯಾಲೇಸ್ (103) ಶತಕದ ನೆರವಿನಲ್ಲಿ 49.3 ಓವರ್‌ಗಳಲ್ಲಿ 245 ರನ್ ಗಳಿಸುವ ಹೊತ್ತಿಗೆ ಆಲೌಟಾಗಿತ್ತು.
9 ತಂಡಗಳು ಭಾಗಿ: ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಟೆಸ್ಟ್ ಆಡುವ 9 ದೇಶಗಳ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಿತ್ತು. ಮಿನಿ ವರ್ಲ್ಡ್ ಕಪ್ ಟೂರ್ನಿ ನಾಕೌಟ್ ಮಾದರಿಯಲ್ಲಿ ನಡೆದಿತ್ತು. ಬಾಂಗ್ಲಾದೇಶ ಟೂರ್ನಮೆಂಟ್‌ನ ಆತಿಥ್ಯ ವಹಿಸಿದ್ದರೂ, ಬಾಂಗ್ಲಾದೇಶ ಆಡುವ ಅರ್ಹತೆ ಪಡೆಯಲಿಲ್ಲ. ಯಾಕೆಂದರೆ ಆಗ ಬಾಂಗ್ಲಾದೇಶ ಟೆಸ್ಟ್ ಆಡುವ ರಾಷ್ಟ್ರವಾಗಿ ಐಸಿಸಿಯಿಂದ ಮಾನ್ಯತೆ ಪಡೆದಿರಲಿಲ್ಲ. ಬಾಂಗ್ಲಾದೇಶದಲ್ಲಿ ಕ್ರಿಕೆಟ್‌ನ್ನು ಉತ್ತೇಜಿಸುವ ಉದ್ದೇಶಕ್ಕಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಆತಿಥ್ಯವನ್ನು ಬಾಂಗ್ಲಾಕ್ಕೆ ನೀಡಲಾಗಿತ್ತು.
ಭಾರತದ ಪ್ರದರ್ಶನ: ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯದ ವಿರುದ್ಧ 44ರನ್‌ಗಳ ಭರ್ಜರಿ ಜಯ ಗಳಿಸಿ ಸೆಮಿಫೈನಲ್ ತಲುಪಿತ್ತು. ಅ.28ರಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಸಚಿನ್ ತೆಂಡುಲ್ಕರ್ ದಾಖಲಿಸಿದ 141 ರನ್ ನೆರವಿನಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 307 ರನ್ ಗಳಿಸಿತ್ತು.
308 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ಸಚಿನ್ ತೆಂಡುಲ್ಕರ್(38ಕ್ಕೆ 4) ದಾಳಿಗೆ ಸಿಲುಕಿ 48.1 ಓವರ್‌ಗಳಲ್ಲಿ 263 ರನ್‌ಗಳಿಗೆ ಆಲೌಟಾಗಿತ್ತು. ಆಸ್ಟ್ರೇಲಿಯದ ಮಾರ್ಕ್ ವಾ(74) ಗರಿಷ್ಠ ಸ್ಕೋರ್ ದಾಖಲಿಸಿದ್ದರು.
ಅ.31ರಂದು ಸೆಮಿಫೈನಲ್‌ನಲ್ಲಿ ಭಾರತ ಸೌರವ್ ಗಂಗುಲಿ(83) ನೆರವಿನಲ್ಲಿ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 242 ರನ್ ಗಳಿಸಿತ್ತು. ವೆಸ್ಟ್‌ಇಂಡೀಸ್ 47 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 245 ರನ್ ಸೇರಿಸುವ ಮೂಲಕ ಗೆಲುವಿನ ದಡ ಸೇರುವುದರೊಂದಿಗೆ ಫೈನಲ್ ಪ್ರವೇಶಿಸಿತ್ತು.

ಹೈಲೈಟ್ಸ್
*ವರ್ಷ :1998
*ಆತಿಥ್ಯ: ಬಾಂಗ್ಲಾದೇಶ
*ಭಾಗವಹಿಸಿದ ತಂಡಗಳು:9
*ಪಂದ್ಯ :8
*ಚಾಂಪಿಯನ್: ದಕ್ಷಿಣ ಆಫ್ರಿಕ
*ದ್ವಿತೀಯ ಸ್ಥಾನ : ವೆಸ್ಟ್‌ಇಂಡೀಸ್
*ಪಂದ್ಯಶ್ರೇಷ್ಠ: ಜಾಕ್ ಕಾಲಿಸ್
*ಸರಣಿ ಶ್ರೇಷ್ಠ: ಜಾಕ್ ಕಾಲಿಸ್
*ಗರಿಷ್ಠ ರನ್: ಫಿಲೋ ವ್ಯಾಲೇಸ್(221)
*ಗರಿಷ್ಠ ವಿಕೆಟ್: ಜಾಕ್ ಕಾಲಿಸ್(8)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News