ಒಂದೇ ಕೊಠಡಿಯ ಶಾಲೆ ನೋಡಿದ್ದೀರಾ?

Update: 2017-05-28 03:34 GMT

ಬೆಂಗಳೂರು, ಮೇ 28: ಕುರುಬರಹಳ್ಳಿ ವಾಣಿಜ್ಯ ಸಂಕೀರ್ಣಕ್ಕೆ ನೀವು ಭೇಟಿ ನೀಡಿದರೆ, 10 ಅಡಿ ಉದ್ದ 10 ಅಡಿ ಅಗಲದ ಒಂದೇ ಕೊಠಡಿಯಲ್ಲಿ ಶಾಲೆಯೊಂದು ನಡೆಯುತ್ತಿದೆ ಎಂದು ನೀವು ಕನಸಿನಲ್ಲೂ ಎಣಿಸಲಾರಿರಿ. ಈ ಬಾಡಿಗೆ ಕೊಠಡಿಯ ಶಾಲೆಯಲ್ಲಿ ಐದು ಮಂದಿ ವಿದ್ಯಾರ್ಥಿಗಳಿದ್ದಾರೆ!
ರಾಜ್ಯ ಸರಕಾರ 10ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಮುಚ್ಚುತ್ತಿದ್ದರೆ, ಶಿಕ್ಷಣ ಇಲಾಖೆ, ವಾಣಿಜ್ಯ ಸಂಕೀರ್ಣವೊಂದರಲ್ಲಿ ಖಾಸಗಿ ಶಾಲೆ ನಡೆಸಲು ಅನುಮತಿ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಇದೀಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿದೆ. ಇಂತಹ ಜಾಗದಲ್ಲಿ ಶಾಲೆ ನಡೆಸಲು ಶಿಕ್ಷಣ ಇಲಾಖೆ ಹೇಗೆ ಅನುಮತಿ ನೀಡಿದೆ ಎಂಬ ಪ್ರಶ್ನೆಯನ್ನು ನಾಗರಿಕರು ಮುಂದಿಟ್ಟಿದ್ದಾರೆ. ಈ ಶಾಲೆಯ ಫೋಟೊ ಸಹಿತ ಆಯೋಗಕ್ಕೆ ದೂರು ನೀಡಲಾಗಿದೆ. ಈ ದೂರಿನ ಆಧಾರದಲ್ಲಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ಆಯೋಗ ನಿರ್ಧರಿಸಿದೆ. ಈ ಶಾಲೆಯ ಹೆಸರು ಸೆಂಟ್ ಜೋಸೆಫ್ ಶಾಲೆ. ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಶಾಲೆ ಎಂದು ನಾಮಫಲಕದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ನೋಟಿಸ್ ನೀಡಲಾಗಿದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2016-17ನೇ ಶೈಕ್ಷಣಿಕ ವರ್ಷಕ್ಕೆ ಕೇವಲ ಐದು ಮಕ್ಕಳು ಮಾತ್ರ ದಾಖಲಾಗಿದ್ದು, ಶಿಕ್ಷಣಹಕ್ಕು ಕೋಟಾದಡಿ ಈ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, "ನಗರದಲ್ಲಿ ಸಾವಿರಾರು ಶಾಲೆಗಳಿವೆ. ಪ್ರಕರಣದ ಪ್ರತಿಯನ್ನು ನೋಡಿದ ಬಳಿಕ ಇದನ್ನು ಪರಿಶೀಲಿಸುತ್ತೇವೆ" ಎಂಬ ಉತ್ತರ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News