ಬಲಿಜ ಸಮುದಾಯಕ್ಕೆ ಪ್ರವರ್ಗಕ್ಕೆ 2‘ಎ’ ಸ್ಥಾನ: ಸಿಎಂ ಭರವಸೆ

Update: 2017-05-28 14:10 GMT

ಬೆಂಗಳೂರು, ಮೇ 28: ಸಾಮಾಜಿಕ-ಆರ್ಥಿಕ ಸಮೀಕ್ಷೆ ವರದಿ ಕೈ ಸೇರಿದ ಬಳಿಕ ಪರಿಶೀಲಿಸಿ, ಬಲಿಜ ಸಮುದಾಯವನ್ನು ಪ್ರವರ್ಗ 2‘ಎ’ಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ನೀಡಿದ್ದಾರೆ.

 ರವಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಬಲಿಜ ಮಹಾಸಭಾ ಆಯೋಜಿಸಿದ್ದ ಬಲಿಜ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮೀಕ್ಷೆಯ ವರದಿ ಇನ್ನು ಕೆಲವೇ ತಿಂಗಳಲ್ಲಿ ಕೈ ಸೇರಿದಲಿದೆ. ವರದಿ ಕೈ ಸೇರಿದ ಬಳಿಕ ಜಾತಿವಾರು ಅಂಕಿ ಅಂಶಗಳನ್ನು ಪರಿಶೀಲಿಸಿ ಸಮುದಾಯವನ್ನು ಪ್ರವರ್ಗ 2‘ಎ’ ಸ್ಥಾನಮಾನ ಕಲ್ಪಿಸಲಾಗುವುದು ಎಂದರು.

  1931ರ ಬಳಿಕ ರಾಜ್ಯದಲ್ಲಿ ಇದುವರೆಗೂ ಜಾತಿವಾರು ಜನಗಣತಿ ನಡೆದಿಲ್ಲ.6.5 ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ ಯಾವ ಜಾತಿ ಎಷ್ಟು ಜನಸಂಖ್ಯೆ ಇದೆ ಎಂಬುವುದು ನಿಖರವಾಗಿ ಹೇಳಲು ಸಾಧ್ಯವಿಲ್ಲ.ಹೀಗಾಗಿ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿಯಲು ಜಾತಿವಾರು ಸಮೀಕ್ಷೆ ಮಾಡಿಸಲಾಗಿದೆ ಎಂದು ಹೇಳಿದರು.

ಜಾತಿ ಸಮೀಕ್ಷೆ ಮಾಡಿದ ತಕ್ಷಣ ಜಾತಿ ವಿಭಜನೆಯಾಗಲ್ಲ.70 ವರ್ಷಗಳಲ್ಲಿ ಜಾತಿಗಳ ಸ್ಥಾನಮಾನಗಳು ಹೇಗಿವೆ ಎಂಬುವುದು ತಿಳಿಯಲು ಈ ಸಮೀಕ್ಷೆಯಿಂದ ಸಾಧ್ಯ.ಆದರೆ ವರದಿ ಕೈ ಸೇರದ ಮುಂಚೆ ವರದಿ ಸೋರಿಕೆಯಾಗಿವೆ ಎಂಬ ದ್ವಂದ್ವ ಚರ್ಚೆಗಳು ನಡೆಯುತ್ತಿವೆ ಎಂದರು.

ರಾಜ್ಯದಲ್ಲಿ ಇದುವರೆಗೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಲಿಜ ಸಮುದಾಯದ ಸಮಾವೇಶ ನಡೆದಿಲ್ಲ.ಅಂಬೇಡ್ಕರ್ ಆಶಯದಂತೆ ಹಿಂದುಳಿತ ವರ್ಗಗಳು ಸಂಘಟಿತರಾಗಿ ಸವಲತ್ತುಗಳನ್ನು ಪಡೆಯಲು ಜಾಗೃತರಾಗಬೇಕು.ತುಳಿತಕ್ಕೆ ಒಳಗಾದ ಸಮುದಾಯಗಳು ಆರ್ಥಿಕ,ಸಾಮಾಕಿ, ರಾಜಕೀಯವಾಗಿ ಸದೃಢರಾದಾಗ ಮಾತ್ರ ಸಮಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಿಡಿಕಾರಿದ ಯಡಿಯೂರಪ್ಪ:ಬಲಿಜ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಬದಲು ಸಿಎಂ ಸಿದ್ದರಾಮಯ್ಯ ಸುತ್ತಿ ಬಳಸಿ ಮಾತನಾಡುತ್ತಿದ್ದಾರೆ. ಬಲಿಜ ಸಮುದಾಯದ ಬೇಡಿಕೆ ಈಡೇರಿಸುತ್ತಾರೆಂದು ನಾನು ನಂಬಿಕೆಯಿಟ್ಟಿದೆ. ಆದರೆ, ಸಿದ್ದರಾಮಯ್ಯ ನಂಬಿಕೆ ಹುಸಿ ಮಾಡಿ, ಕಾರ್ಯಕ್ರಮದ ಅರ್ಧದಲ್ಲೇ ಹೊರಟು ಹೋದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಿಡಿಕಾರಿದರು.

 ವೀರಪ್ಪ ಮೊಯ್ಲಿ ಬಲಿಜ ಸಮುದಾಯವನ್ನು ಪ್ರವರ್ಗ 2(ಎ)ಯಿಂದ 3(ಎ)ಗೆ ಸೇರ್ಪಡೆಗೊಳಿಸುವ ಮೂಲಕ ಶಿಕ್ಷಣ ಉದ್ಯೋಗದ ಮೀಸಲಾತಿ ಕಡಿತಗೊಳಿಸಿದ್ದಾರೆ. ಇಷ್ಟು ದಿನ ಕಾದವರು ಇನ್ನು 8 ತಿಂಗಳು ಕಾಯಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಬಲಿಜ ಸಮುದಾಯವನ್ನು ಪ್ರವರ್ಗ 2‘ಎ’ಗೆ ಸೇರ್ಪಡೆ ಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಬಲಿಜ ಸಮುದಾಯದ ಬೇಡಿಕೆಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಪ್ರವರ್ಗ 2(ಎ)ಗೆ ಸೇರಿಸಲು ಬಿಜೆಪಿ ಬದ್ಧವಾಗಿದೆ. ಈ ಕುರಿತು ಕೇಂದ್ರ ಸರಕಾರದ ಜೊತೆ ಚರ್ಚಿಸಲಾಗುವುದು ಎಂದರು.

ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ,ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಆರ್.ವಿ.ದೇವರಾಜ್, ಮೇಲ್ಮನೆ ಸದಸ್ಯೆ ತಾರಾ, ಹಿಂ.ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್, ಸಂಸದ, ಬಲಿಜ ಮಹಾ ಸಭಾದ ಅಧ್ಯಕ್ಷ ಪಿ.ಸಿ.ಮೋಹನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News