ವೈದ್ಯರಿಂದ ಸಿರಿಧಾನ್ಯಗಳ ಜಾಗೃತಿ ಮೂಡಿಸಲು ಹಿಂದೇಟು: ಡಾ.ಖಾದರ್‌

Update: 2017-05-28 16:35 GMT

ಬೆಂಗಳೂರು, ಮೇ 28: ಜನರು ದಿನನಿತ್ಯ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಿದ್ದರೂ ನಮ್ಮಲ್ಲಿರುವ ವೈದ್ಯರು ಸಿರಿಧಾನ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಆಹಾರ ತಜ್ಞ ಡಾ. ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಗ್ರಾಮೀಣ ನ್ಯಾಚುರಲ್ ಮತ್ತು ಗ್ರಾಮೀಣ ಕುಟುಂಬದ ಸಹಯೋಗದೊಂದಿಗೆ ಲಾಲ್‌ಬಾಗ್‌ನ ಡಾ. ಎಂ.ಎಚ್. ಮರಿ ಗೌಡಹಾಲ್‌ನಲ್ಲಿ ಆಯೋಜಿಸಿದ್ದ 5ನೇ ವಾರ್ಷಿಕ ಸಿರಿಧಾನ್ಯ ಉತ್ಸವದಲ್ಲಿ ‘ವಿಶ್ವ ಚೇತನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಿರಿಧಾನ್ಯಗಳು ನಮ್ಮ ದೇಶದ ಆಹಾರ ಸಂಸ್ಕೃತಿಯನ್ನು ಬದಲಾಯಿಸುವ ಕಡೆಗೆ ಮುಖ ಮಾಡುತ್ತಿವೆ. ಆದರೂ, ನಮ್ಮಲ್ಲಿರುವ ವೈದ್ಯರು ತಮ್ಮ ಸ್ವ ಹಿತಾಸಕ್ತಿ ಕಾಪಾಡಿಕೊಳ್ಳಲು ಅವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ರೋಗಮುಕ್ತ ಜೀವನ ನಡೆಸಲು ಸಿರಿಧಾನ್ಯಗಳಿಂದ ಮಾತ್ರ ಸಾಧ್ಯ. ಅದರಲ್ಲೂ ನಗರದ ಜನರಿಗೆ ಬಿಪಿ, ಶುಗರ್, ಹೃದಯ ತೊಂದರೆ, ನರ ರೋಗ, ಮೂರ್ಛೆ ರೋಗದವರಿಗೆ ಸಿರಿಧಾನ್ಯಗಳ ಬಳಕೆ ಹೆಚ್ಚು ಉಪಯುಕ್ತವಾದುದು. ವಿದೇಶಗಳಿಂದದ ಬಂದಿರುವ ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕರ. ಇವುಗಳನ್ನು ತ್ಯಜಿಸಿ, ನಮ್ಮ ಸ್ವದೇಶಿ ನೆಲದಲ್ಲಿ ಬೆಳೆದ ಬೇಲದಹಣ್ಣು, ಎಳನೀರಿನಂತಹ ಪದಾರ್ಥಗಳನ್ನು ಸೇವಿಸಿ, ಆರೋಗ್ಯ ಪಡೆಯಿರಿ ಎಂದು ಸಲಹೆ ನೀಡಿದರು.

ಪ್ಲಾಸ್ಟಿಕ್ ನಿಷೇಧ ಅನುಷ್ಟಾನದಲ್ಲಿ ವಿಫಲ: ಸರಕಾರ ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೆ, ನೀರಿನ ಬಾಟೆಲ್‌ಗಳನ್ನು ಪ್ಲಾಸ್ಟಿಕ್‌ನ ಅಡಿ ತಂದಿರುವುದು ಬೇಸರ ಸಂಗತಿ ಎಂದರು.

ಪ್ಲಾಸ್ಟಿಕ್ ಬಾಟೆಲ್‌ಗಳಲ್ಲಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದುದು. ಹೀಗಾಗಿ ನೀರಿನ ಬಾಟೆಲ್‌ಗಳು ಸೇರಿದಂತೆ ಎಲ್ಲಾ ಬಗೆಯ ಬಗೆಯ ಪ್ಲಾಸ್ಟಿಕ್ ನಿಷೇಧದ ಕಾಯಿದೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ನಟ ಹಾಗೂ ನಿರ್ದೇಶಕ ಬಿ. ಸುರೇಶ್ ಮಾತನಾಡಿ, ನಾನು ಸಿರಿಧಾನ್ಯಗಳ ಮಹತ್ವವನ್ನು ಅರಿತಿದ್ದೇನೆ. ಮನೆಯಲ್ಲಿ ಮಾತ್ರವಲ್ಲ ನಾನಾ ಭಾಗಗಳಿಗೆ ಶೂಟಿಂಗ್‌ಗೆ ಹೋದಾಗ ಕೂಡ ನಾನು ಮನೆಯಿಂದ ನವಣೆಯಂತ ಕೆಲವು ಸಿರಿಧಾನ್ಯಗಳನ್ನು ಜತೆಯಲ್ಲಿ ಹೊತ್ತೊಯ್ಯುತ್ತೇನೆ. ಅಲ್ಲಿ ಅನ್ನ ಮಾಡಿಕೊಂಡು ಊಟ ಮಾಡುತ್ತೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ನಟ ಅಚ್ಯುತಕುಮಾರ್, ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ.ಎಚ್. ಶ್ರೀಧರಮೂರ್ತಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News