ಡಾ.ರಾಜ್ ಸಮಾಧಿ ಪಕ್ಕದಲ್ಲೇ ಪಾರ್ವತಮ್ಮ ಅಂತ್ಯಕ್ರಿಯೆ
ಬೆಂಗಳೂರು, ಮೇ 31: ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರಕಾರಿ ಗೌರವ ಹಾಗೂ ಹಿಂದೂ ಸಂಪ್ರದಾಯದಂತೆ ನೆರವೇರಿತು. ಮಕ್ಕಳು, ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಿದರು.
ಸಂಜೆಯವರೆಗೂ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಬಂಧು-ಮಿತ್ರರು, ಮಂತ್ರಿಗಳು ಗಣ್ಯರು, ಚಲನಚಿತ್ರ ಲೋಕದ ಪ್ರಮುಖರೂ ಸೇರಿದಂತೆ ಸಾವಿರಾರು ಮಂದಿ ಪಾರ್ವತಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಂಜೆಯಾಗುತ್ತಿದ್ದಂತೆ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಕಂಠೀರವ ಸ್ಟುಡಿಯೋ ಬಳಿ ಕೊಂಡೊಯ್ಯಲಾಯಿತು.
ಡಾ. ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ಅವರ ಧರ್ಮಪತ್ನಿ ಪಾರ್ವತಮ್ಮ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸುವ ಪ್ರಕ್ರಿಯೆ ನಡೆಯಿತು.ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ, ವಿಧಿವಿಧಾನಗಳನ್ನು ಆರಂಭಿಸಲಾಯಿತು. ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸೊಸೆಯಂದಿರಾದ ಗೀತಾ, ಅಶ್ವಿನಿ, ಮಂಗಳಾ ಹಾಗೂ ಕುಟುಂಬ ಸದಸ್ಯರನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸರಕಾರದ ಪರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಪುಷ್ಪನಮನ ಸಲ್ಲಿಸಿದರು.