ಜಿಡಿಪಿ ಕುಸಿತಕ್ಕೆ ಹಲವಾರು ಕಾರಣಗಳು:ಜೇಟ್ಲಿ

Update: 2017-06-01 13:55 GMT

ಹೊಸದಿಲ್ಲಿ,ಜೂ.1: ನೋಟು ರದ್ದತಿ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ ಕುಸಿತಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯಗಳನ್ನು ಗುರುವಾರ ಇಲ್ಲಿ ತಳ್ಳಿಹಾಕಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು, 2016-17ನೇ ಸಾಲಿನ ಚತುರ್ಥ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ.6.1ಕ್ಕೆ ಕುಸಿದಿರುವುದಕ್ಕೆ ಜಾಗತಿಕ ಸ್ಥಿತಿ ಸೇರಿದಂತೆ ಹಲವಾರು ಅಂಶಗಳು ಕಾರಣವಾಗಿವೆ ಎಂದು ಹೇಳಿದರು.


ಕಳೆದ ವರ್ಷದ ನ.8ರಂದು ಸರಕಾರವು 500 ಮತ್ತು 1,000 ರೂ.ನೋಟುಗಳ ನಿಷೇಧವನ್ನು ಪ್ರಕಟಿಸುವ ಮುನ್ನವೇ ಆರ್ಥಿಕ ಬೆಳವಣಿಗೆಯು ಕೊಂಚ ಕುಂಠಿತಗೊಂಡಿತ್ತು ಎಂದರು.


ಮೋದಿ ಸರಕಾರವು ಮೂರು ವರ್ಷಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಜೇಟ್ಲಿ, ಏಳರಿಂದ ಎಂಟು ಶೇಕಡಾ ಬೆಳವಣಿಗೆಯು ಸಮರ್ಥನೀಯವಾಗಿದೆ. ಜಾಗತಿಕ ಮಾನದಂಡದಲ್ಲಿ ಇದು ಅತ್ಯುತ್ತಮ ಬೆಳವಣಿಗೆ ಮಟ್ಟವಾಗಿದ್ದು, ಭಾರತೀಯ ದೃಷ್ಟಿಯಿಂದ ನ್ಯಾಯಯುತವಾಗಿದೆ ಎಂದು ಹೇಳಿದರು.

ಸರಕಾರವು ಬುಧವಾರ ಜಿಡಿಪಿ ದತ್ತಾಂಶಗಳನ್ನು ಬಿಡುಗಡೆಗೊಳಿಸಿದ್ದು, 2016-17ನೇ ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು ಶೇ.6.1ಕ್ಕೆ ಕುಸಿದಿದ್ದರೆ, ಪೂರ್ಣವರ್ಷಕ್ಕೆ ಶೇ.7.1ಕ್ಕೆ ಇಳಿದಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟವಾಗಿದೆ.
ದೇಶವು ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದ ಜೇಟ್ಲಿ, ಬ್ಯಾಂಕಿಂಗ್ ಕ್ಷೇತ್ರವನ್ನು ಕಾಡುತ್ತಿರುವ ಕೆಟ್ಟಸಾಲಗಳ ಸಮಸ್ಯೆಯನ್ನು ಬಗೆಹರಿಸುವುದು ಮತ್ತು ಖಾಸಗಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು ಇವು ಪ್ರಮುಖ ಸವಾಲುಗಳಲ್ಲಿ ಸೇರಿವೆ ಎಂದರು.


 ಹಿಂದಿನ ಸಾಲಿನ ಚತುರ್ಥ ತ್ರೈಮಾಸಿಕಕ್ಕೆ ಹೋಲಿಸಿದರೆ 2016-17ನೇ ಸಾಲಿನ ಇದೇ ಅವಧಿಯಲ್ಲಿ ದೇಶದ ಜಿಡಿಪಿ ದರ ಶೇ.6.1ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಚೀನಾ ಶೇ.6.9 ಬೆಳವಣಿಗೆ ದರವನ್ನು ದಾಖಲಿಸಿದೆ, ಇದರೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಸ್ಥಾನಮಾನವನ್ನು ಕಳೆದುಕೊಂಡಿದ್ದು, ಅದೀಗ ಚೀನಾದ ಪಾಲಾಗಿದೆ.


ಹಣಕಾಸು ವರ್ಷ 2016ರಲ್ಲಿ ಪರಿಷ್ಕೃತ ಬೆಳವಣಿಗೆ ದರ ಶೇ.8ಕ್ಕೆ ಹೋಲಿಸಿದರೆ ಪೂರ್ಣವರ್ಷ(2016-17)ದ ಜಿಡಿಪಿ ಪ್ರಗತಿ ದರವು ಶೇ.7.1ರಷ್ಟಿದ್ದು, ಇದು ಅಧಿಕೃತ ಅಂದಾಜುಗಳಿಗೆ ಅನುಗುಣವಾಗಿದೆ. ರೂಟರ್ಸ್ ನಡೆಸಿದ್ದ 35 ಆರ್ಥಿಕ ತಜ್ಞರ ಅಭಿಪ್ರಾಯ ಸಂಗ್ರಹವು ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿದರ ಶೇ.7.1ರಷ್ಟಿರಲಿದೆ ಎಂದು ಭವಿಷ್ಯ ನುಡಿದಿತ್ತು. ಹಿಂದಿನ ತ್ರೈಮಾಸಿಕ (ಅಕ್ಟೋಬರ್-ಡಿಸೆಂಬರ್)ದಲ್ಲಿ ಜಿಡಿಪಿ ಪ್ರಗತಿ ದರ ಶೇ.7ರಷ್ಟಾಗಿತ್ತು.


ಪೇಟೆಯ ನಿರೀಕ್ಷೆಗಳನ್ನು ಹುಸಿಗೊಳಿಸಿರುವ ಬುಧವಾರದ ಜಿಡಿಪಿ ದತ್ತಾಂಶಗಳು ಕಳೆದ ವಾರವಷ್ಟೇ ಕೇಂದ್ರದಲ್ಲಿ ಮೂರು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿರುವ ನರೇಂದ್ರ ಮೋದಿ ಸರಕಾರದ ಪಾಲಿಗೆ ನಿರಾಶಾದಾಯಕವಾಗಿದೆ. ಮೋದಿಯವರ ನೋಟು ರದ್ದತಿ ಕ್ರಮವು ಜಿಡಿಪಿ ಬೆಳವಣಿಗೆಯ ಮೇಲೆ ಪರಿಣಾಮ ಬೀರಿರುವಂತಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.


ಜಿಡಿಪಿ ವೈಫಲ್ಯದಿಂದ ಬೇರೆಡೆಗೆ ಗಮನ ಸೆಳೆಯಲು ಯತ್ನ:ರಾಹುಲ್
ಜಿಡಿಪಿ ಬೆಳವಣಿಗೆ ಕುಸಿತಕ್ಕೆ ಗುರುವಾರ ಸರಕಾರವನ್ನು ಟೀಕಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಅದು ದೇಶದ ಗಮನವನ್ನು ತನ್ನ ವೈಫಲ್ಯಗಳಿಂದ ಬೇರೆಡೆಗೆ ಸೆಳೆಯಲು ಇತರ ವಿಷಯಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.ಕುಸಿಯುತ್ತಿರುವ ಜಿಡಿಪಿ,ಹೆಚ್ಚುತ್ತಿರುವ ನಿರುದ್ಯೋಗ.... ಈ ಮೂಲಭೂತ ವೈಫಲ್ಯಗಳಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇತರ ಪ್ರತಿಯೊಂದೂ ವಿಷಯವನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಟ್ವೀಟಿಸಿದ್ದಾರೆ.

ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿದರ ಶೇ.6.1ಕ್ಕೆ ಕುಸಿದ ಬಳಿಕ ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಕಳೆದುಕೊಂಡಿದೆ ಎಂಬ ಮಾಧ್ಯಮ ವರದಿಯನ್ನು ಅವರು ತನ್ನ ಟ್ವೀಟ್ ಜೊತೆ ಲಗತ್ತಿಸಿದ್ದಾರೆ.


ನೋಟು ರದ್ದತಿ ಕುರಿತ ಭೀತಿ ನಿಜವಾಗಿದೆ:ಮಮತಾ
ಜಿಡಿಪಿ ಕುಸಿತಕ್ಕಾಗಿ ಮೋದಿ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ನೋಟು ಅಮಾನ್ಯ ಕುರಿತಂತೆ ತನ್ನ ಭೀತಿಯು ಸರಿಯಾಗಿತ್ತು ಎನ್ನುವುದು ಈಗ ಸಾಬೀತಾಗಿದೆ ಎಂದಿದ್ದಾರೆ.
ವ್ಯಾಪಕ ಉದ್ಯೋಗ ನಷ್ಟದ ಜೊತೆಗೆ ಕೃಷಿ ಮತ್ತು ಅಸಂಘಟಿತ ಕ್ಷೇತ್ರಗಳು ಅತ್ಯಂತ ದುರವಸ್ಥೆಯಲ್ಲಿವೆ ಎಂದು ಟ್ವೀಟಿಸಿರುವ ಅವರು, ದೇಶವನ್ನು ಈ ಬಿಕ್ಕಟ್ಟಿಗೆ ತಳ್ಳಿರುವ ಜನರು ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News