ಅಂಗವೈಕಲ್ಯ, ಹೆತ್ತವರ ಅಸಹಕಾರ ಎರಡನ್ನೂ ಮೀರಿ ನಿಂತ ಉಮ್ಮುಲ್ ಖೇರ್

Update: 2017-06-02 10:46 GMT

ನವದೆಹಲಿ,ಜೂನ್  2 : ದುರ್ಬಲ ಮೂಳೆಯ ಸಮಸ್ಯೆಯಿಂದ ನಲುಗುತ್ತಿರುವ ಆದರೆ ಆತ್ಮವಿಶ್ವಾಸದ ಪ್ರತೀಕದಂತಿರುವ 28 ವರ್ಷದ ಉಮ್ಮುಲ್ ಖೇರ್ ಯುಪಿಎಸ್ಸಿ ಪರೀಕ್ಷೆಯಲ್ಲಿ 420ನೇ ರ್ಯಾಂಕ್ ಪಡೆದಿದ್ದು ದೊಡ್ಡ ಸಾಧನೆಯೇ ಸರಿ. ಇಲ್ಲಿಯ ತನಕ 16 ಬಾರಿ ಮೂಳೆ ಮುರಿತಕ್ಕೊಳಗಾಗಿರುವ ಹಾಗೂ ಎಂಟು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಆಕೆ ತನ್ನ ಆರೋಗ್ಯ ಸಮಸ್ಯೆಯ ಹೊರತಾಗಿಯೂ ಎಂಟನೇ ತರಗತಿ ನಂತರವೂ ಕಲಿಯಬಯಸಿದಾಗ ಆಕೆಯ ಬಡ ಹೆತ್ತವರು ಆಕೆಯನ್ನು ತೊರೆದಿದ್ದು, ಅಂದಿನಿಂದ ಆಕೆಯದ್ದು ಏಕಾಂಗಿ ಹೋರಾಟವಾಗಿತ್ತು. ಕಷ್ಟ ಪಟ್ಟು ಓದಿ ಮುಂದೆ ಬಂದು ದಿಲ್ಲಿ ವಿಶ್ವವಿದ್ಯಾಲಯ ಕಾಲೇಜು ಸೇರಿದ ಆಕೆ ನಂತರ ಜೆಎನ್‌ಯುವಿನ್ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ಈಗ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾಳೆ.

ಆಕೆ ಈಗ ಅಂಗವಿಕಲರ ಕೋಟಾ ಅಡಿಯಲ್ಲಿ ತನಗೆ ಐಎಎಸ್ ಹುದ್ದೆ ದೊರೆಯಬಹುದೆಂಬ ಆತ್ಮವಿಶ್ವಾಸದಲ್ಲಿದ್ದಾಳೆ. ರಾಜಸ್ಥಾನ ಮೂಲದ ಆಕೆಯ ಕುಟುಂಬ ಆಕೆ 5ನೇ ತರಗತಿಯಲ್ಲಿರುವಾಗೇ ದಿಲ್ಲಿಗೆ ಬಂದಿತ್ತು. ಆಕೆಯ ತಂದೆ ಹಜ್ರತ್ ನಿಜಾಮುದ್ದೀನ್ ಪಕ್ಕ ರಸ್ತೆ ಬದಿಯಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದರೆ ಕುಟುಂಬ ಹತ್ತಿರದ ಕೊಳಚೆಗೇರಿಯಲ್ಲಿ ವಾಸವಾಗಿತ್ತು.

ಐದನೇ ತರಗತಿಯಿಂದ ಎಂಟನೇ ತರಗತಿ ತನಕ ಅಮರ್ ಜ್ಯೋತಿ ಜ್ಯಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣ ಪಡೆದ ಆಕೆಗೆ ಮುಂದೆ ಸ್ಕಾಲರ್ ಶಿಪ್ ದೊರೆತ ಕಾರಣ ಶಿಕ್ಷಣ ಮುಂದುವರಿಸಲು ನಿರ್ಧರಿಸಿದಳಾದರೂ ಹೆತ್ತವರು ವಿರೋಧಿಸಿ ಆಕೆ ಶಾಲೆಗೆ ಹೋದರೆ ಆಕೆಯೊಂದಿಗೆ ಸಂಬಂಧ ಮುರಿಯುವುದಾಗಿ ಬೆದರಿಸದ್ದರು. ಉಪಾಯವಿಲ್ಲದೆ ಮನೆ ತ್ಯಜಿಸಿ ಝುಗ್ಗಿಯೊಂದನ್ನು ಬಾಡಿಗೆಗೆ ಪಡೆದು ಮನೆಯಲ್ಲಿ ಟ್ಯೂಷನ್ ನೀಡಿ ದಿನ ದೂಡಲು ಆಕೆ ಆರಂಭಿಸಿದ್ದಳು. ದಿನ ಕಳೆದಂತೆ ಹಲವು ಬಡ ಕುಟುಂಬದ ಮಕ್ಕಳು ಆಕೆಯ ಬಳಿ ಟ್ಯೂಷನ್ ಗೆ ಬರಲಾರಂಬಿಸಿದ್ದರು ಆದರೆ ಅವರಿಂದ ಆಕೆ ಹೆಚ್ಚಿನ ಶುಲ್ಕ ನಿರೀಕ್ಷಿಸುವಂತಿರಲಿಲ್ಲ.

ಹೀಗೆ ಟ್ಯೂಷನ್ ಹಣದಿಂದ ಆಕೆ 12ನೇ ತರಗತಿ ನಂತರ ಗರ್ಗಿ ಕಾಲೇಜಿಗೆ ಸೇರಿದಳು. ಈತನ್ಮಧ್ಯೆ 2012ರಲ್ಲಿ ಅಪಘಾತವೊಂದರ ಕಾರಣ ಒಂದು ವರ್ಷ ಗಾಲಿಕುರ್ಚಿಯಲ್ಲಿ ಕಳೆಯಬೇಕಾಯಿತು.

ಪದವಿ ಪೂರೈಸಿದ ಬಳಿಕ ಜೆಎನ್‌ಯುವಿಗೆ ಪ್ರವೇಶ ಪಡೆದ ಆಕೆ ತಿಂಗಳಿಗೆ ರೂ 2000 ಸ್ಕಾಲರ್ ಶಿಪ್ ಪಡೆಯಲಾರಂಭಿಸಿದ್ದಳು. 2013ರಲ್ಲಿ ಜೂನಿಯರ್ ರಿಸರ್ಚ್ ಫೆಲ್ಲೋಶಿಪ್ ಪರೀಕ್ಷೆಯಲ್ಲಿ ಆಕೆ ತೇರ್ಗಡೆಯಾದ ನಂತರ ಆಕೆಗೆ ಮಾಸಿಕ ರೂ 25000 ದೊರೆಯಲಾರಂಭಿಸಿತು. ನಂತರ ಯುಪಿಎಸ್ಸಿ ಪರೀಕ್ಷೆಗಾಗಿ ಬಹಳಷ್ಟು ಶ್ರಮ ಪಟ್ಟು ಇದೀಗ ಯಶಸ್ವಿಯಾಗಿದ್ದಾಳೆ ಈಕೆ.

ಉಮ್ಮುರ್ ಈಗ ರಾಜಸ್ಥಾನದಲ್ಲಿರುವ ತನ್ನ ಹೆತ್ತವರನ್ನು ಮತ್ತೆ ಭೇಟಿಯಾಗುವುದಾಗಿ ಹೇಳುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News