ಅಮೆರಿಕ : ಈಜುಕೊಳದಲ್ಲಿ ಮುಳುಗಿ ಆಂಧ್ರ ಮೂಲದ ಟೆಕ್ಕಿ, ಪುತ್ರ ಸಾವು

Update: 2017-06-02 11:41 GMT

ಹೊಸದಿಲ್ಲಿ,ಜೂ.2 : ಅಮೆರಿಕಾದ ಮಿಚಿಗನ್ ನಗರದಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿರುವ ಆಂಧ್ರ ಪ್ರದೇಶ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ನಾಗರಾಜು ಸುರೆಪಲ್ಲಿ (31) ತಮ್ಮ ಮೂರು ವರ್ಷದ ಪುತ್ರ ಅನಂತ್ ಜತೆ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿರುವ ಈಜು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಾಗರಾಜು ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಅಮೆರಿಕಾದಲ್ಲಿ ವಾಸಿಸುತಿದ್ದರು.

ಅಪಾರ್ಟ್‌ಮೆಂಟಿನ ಕ್ಲಬ್ ಹೌಸ್ ಗೆ ನಡೆದುಕೊಂಡು ಹೋಗುತ್ತಿದ್ದವರಿಬ್ಬರು ಎರಡು ಶವಗಳು ಈಜುಕೊಳದಲ್ಲಿ ತೇಲುತ್ತಿರುವುದನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

 ನಾಗರಾಜು ತಮ್ಮ ಪುತ್ರನನ್ನು ಸ್ವಿಮ್ಮಿಂಗ್ ಪೂಲ್ ಬಳಿ ಕರೆದುಕೊಂಡು ಹೋಗಿದ್ದಾಗ ಮಗು ಟ್ರೈಸಿಕಲ್ ನಿಂದ ಜಾರಿ ನೀರಿಗೆ ಬಿದ್ದಿರಬೇಕೆಂದು ಊಹಿಸಲಾಗಿದೆ. ಆಗ ಮಗುವನ್ನು ಕಾಪಾಡಲು ನಾಗರಾಜು ನೀರಿಗೆ ಧುಮುಕಿದ್ದು ಇಬ್ಬರೂ ಮುಳುಗಿ ಸಾವನ್ನಪ್ಪಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಅವರಿಬ್ಬರೂ ಈಜುಡುಗೆ ಧರಿಸದೇ ಇದ್ದುದರಿಂದ ಅವರು ಈಜಾಡಲು ಅಲ್ಲಿಗೆ ತೆರಳಿರಲಿಲ್ಲವೆಂಬುದು ಸ್ಪಷ್ಟವಾಗಿದೆ ಎಂದೂ ತಿಳಿದು ಬಂದಿದೆ.

ಇದೀಗ ಮೃತ ದೇಹಗಳನ್ನು ಅವರ ಹುಟ್ಟೂರಾದ ಗುಂಟೂರಿಗೆ ಸಾಗಿಸಲು ಇನ್ಫೋಸಿಸ್ ಸಂಸ್ಥೆಯಲ್ಲಿರುವ ನಾಗರಾಜು ಅವರ ಸಹೋದ್ಯೋಗಿಗಳು ಕ್ರೌಡ್ ಫಂಡಿಂಗ್ ಮೂಲಕ 1.5 ಲಕ್ಷ ಡಾಲರ್ ಸಂಗ್ರಹಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News