ಲಂಡನ್ ನಲ್ಲಿ ಉಗ್ರರ ದಾಳಿ: ಪ್ರಮುಖಾಂಶಗಳು

Update: 2017-06-04 03:48 GMT
ಲಂಡನ್, ಜೂ.4: ಲಂಡನ್‌ಬ್ರಿಡ್ಜ್‌ನಲ್ಲಿ ವಾಹನವೊಂದು ಪಾದಚಾರಿಗಳಿಗೆ ಢಿಕ್ಕಿ ಹೊಡೆದಿದೆ ಎಂಬ ಮಾಹಿತಿ ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 10:08ಕ್ಕೆ ಬಂದಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಸೇತುವೆಯ ದಕ್ಷಿಣ ತುದಿಯ ಬೊರೂಹ್ ಮಾರುಕಟ್ಟೆಯಲ್ಲಿ ಇರಿತದ ವರದಿಗಳೂ ಲಭಿಸಿದೆ. 1.ಪಾದಚಾರಿಗಳ ಮೇಲೆ ಒಂದು ವ್ಯಾನ್ ನುಗ್ಗುತ್ತಿರುವುದನ್ನು ಹಾಗೂ ಒಬ್ಬ ವ್ಯಕ್ತಿ ಚಾಕು ಹಿಡಿದು ಪಾದಚಾರಿಗಳ ಮೇಲೆ ಎರಗುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ. ಘಟನೆಯಲ್ಲಿ ಐದು ಮಂದಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. 2. ಇಟಲಿ ಛಾಯಾಗ್ರಾಹಕ ಗ್ಯಾಬ್ರಿಯೆಲ್ ಸ್ಕಿಯೊಟೊ ಕೂಡಾ ಸ್ಥಳದಲ್ಲೇ ಇದ್ದು, ಪಬ್‌ನ ಹೊರಗೆ ಮೂವರಿಗೆ ಗುಂಡಿಕ್ಕಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತ ಚಿತ್ರಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. 3. ಸಶಸ್ತ್ರ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಅಧಿಕಾರಿಗಳು ಟ್ವಿಟ್ಟರ್ ಮೂಲಕ ಜನರಿಗೆ "ಓಡಿ, ಅಡಗಿಕೊಳ್ಳಿ ಮತ್ತು ದಾಳಿಯ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ" ಎಂಬ ಮಾಹಿತಿಯನ್ನು ರವಾನಿಸಿದ್ದಾರೆ. ಲಂಡನ್ ಬ್ರಿಡ್ಜ್ ಬಳಿ ಇಬ್ಬರು ಹಂತಕರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಸನ್ ಪತ್ರಿಕೆ ವರದಿ ಮಾಡಿದೆ. 4. ಶನಿವಾರದ ಘಟನೆಯಲ್ಲಿ ಆರು ಮಂದಿ ಬಲಿಯಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮೂವರು ಹಂತಕರನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ದಾಳಿಕೋರರು ನಕಲಿ ಆತ್ಮಹತ್ಯೆ ಜಾಕೆಟ್ ಧರಿಸಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 5, ಉಗ್ರರ ದಾಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಧಾನಿ ಥೆರೇಸಾ ಮೇ ದೃಢಪಡಿಸಿದ್ದಾರೆ. ಪರಿಸ್ಥಿತಿ ಅವಲೋಕನಕ್ಕೆ ತುರ್ತು ಸಂಪುಟ ಸಭೆ ಕರೆಯಲಾಗಿದೆ. 6. ಕನಿಷ್ಠ 20 ಮಂದಿ ಗಾಯಾಳುಗಳಿಗೆ ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲಂಡನ್ ಆಂಬುಲೆನ್ಸ್ ಸರ್ವೀಸ್ ಪ್ರಕಟಿಸಿದೆ. 7. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್‌ಗೆ ಸಹಾಯಹಸ್ತ ಚಾಚುವುದಾಗಿ ಟ್ವೀಟ್ ಮಾಡಿದ್ದಾರೆ. 8. ಮ್ಯಾಂಚೆಸ್ಟರ್‌ನಲ್ಲಿ ಸಂಗೀತ ಕಚೇರಿಯ ಮೇಲೆ ದಾಳಿ ಮಾಡಿ 22 ಮಂದಿಯನ್ನು ಹತ್ಯೆ ಮಾಡಿದ ಒಂದು ವಾರದ ಒಳಗಾಗಿ ಮತ್ತೊಂದು ದಾಳಿ ನಾಗರಿಕರನ್ನು ಕಂಗೆಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News