ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗಬೇಕೆಂಬ ನಿಯಮಾವಳಿಯಿಲ್ಲ: ಡಾ.ಜಿ.ಪರಮೇಶ್ವರ್

Update: 2017-06-04 07:32 GMT
ಬೆಂಗಳೂರು, ಜೂ.4: ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿಯಾಗಬೇಕು ಎಂಬುದು ನಿಯಮಾವಳಿಯಿಲ್ಲ. ದಲಿತ ಮುಖ್ಯಮಂತ್ರಿ ಕೂಗು ಈಗ ಅಪ್ರಸ್ತುತ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಶಾಸಕಾಂಗ ಪಕ್ಷ ಆಯ್ಕೆ ಮಾಡಿದ ಮೇಲೆ ಸಿಎಂ ಆಯ್ಕೆ ನಿರ್ಧಾರವಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು. ನಾನು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಆದರೆ, ಮುಖ್ಯಮಂತ್ರಿ ಅದನ್ನು ರಾಜ್ಯಪಾಲರಿಗೆ ಇನ್ನೂ ಕಳುಹಿಸಿಲ್ಲ. ನಾಳೆ ಗೊಂದಲ ಬಗೆಹರಿಯುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈ ಕಮಾಂಡ್ ಅತ್ಯುನ್ನತ ಹುದ್ದೆಯನ್ನು ನೀಡಿದ್ದು, ಈ ಹೊಣೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ದೇಶದಲ್ಲಿ ಕಾಂಗ್ರೆಸ್ ಅಡಿಪಾಯ ಕಳೆದುಕೊಳ್ಳುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಉಳಿದಿದೆ ಎಂಬ ಆರೋಪ ಇದೆ. ಆದರೆ ಕಾಂಗ್ರೆಸ್ ನ ಒಟ್ಟಾರೆ ಶೇಕಡಾವಾರು ಮತಗಳಿಕೆ ಪ್ರಮಾಣ ಕಡಿಮೆಯಾಗಿಲ್ಲ. ಹೀಗಾಗಿ ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತ ಕನಸು ಸಾಕಾರವಾಗುವುದಿಲ್ಲ ಎಂದರು. ಯಾರಿಗೆ ಅನ್ನಭಾಗ್ಯ ಯೋಜನೆಯಿಂದ ಉಪಯೋಗವಾಗುತ್ತಿದೆಯೋ ಅಂತಹವರು ಟೀಕೆ ಮಾಡುತ್ತಿಲ್ಲ. ಆದರೆ ಹೊರಗೆ ನಿಂತವರು ಮಾತ್ರ ಟೀಕಿಸುತ್ತಾರೆ. ಕೂಲಿ‌ ಕಾರ್ಮಿಕರಿಗೆ, ಬಡಜನರಿಗೆ ಇಂದಿಗೂ ಅನ್ನಭಾಗ್ಯ ಅತ್ಯಾವಶ್ಯಕವಾಗಿದೆ. ನರೇಂದ್ರ ಮೋದಿ ರಾಷ್ಟ್ರದ ಜನರಿಗೆ ಕನಸು ತೋರಿಸಿ, ಅದನ್ನು ಮಾರ್ಕೆಟಿಂಗ್ ಮಾಡಿ ಜನ ಕೊಳ್ಳುವ ಹಾಗೆ ಮಾಡಿದರು. ಆದರೆ ಮೂರು ವರ್ಷಗಳಾದರೂ ಆ ಕನಸು ಸಾಕಾರಗೊಳಿಸುವ ಯಾವುದೇ ಲಕ್ಷಣವೂ ಕಾಣಿಸುತ್ತಿಲ್ಲ. ಇದು ದೇಶದ ದೌರ್ಭಾಗ್ಯ ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News