ಅರಬ್ ರಾಜತಾಂತ್ರಿಕ ಬಿಕ್ಕಟ್ಟು: ಭಾರತದ ಮೇಲೆ ಏನು ಪರಿಣಾಮ?

Update: 2017-06-05 14:04 GMT

ಅರಬ್ ದೇಶಗಳು ಕತರ್ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದು ಜಾಗತಿಕ ವಲಯದಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿದೆ.

ಹಾಗಾದರೆ, ಈ ಬೆಳವಣಿಗೆಯಿಂದ ಭಾರತದ ಮೇಲೆ ಆಗುವ ಪರಿಣಾಮವೇನು?

ಭಾರತ ತನ್ನ ಇಂಧನ ಅವಶ್ಯಕತೆಯ ಅರ್ಧಕ್ಕೂ ಹೆಚ್ಚಿನದನ್ನು ಪರ್ಸಿಯನ್ ಕೊಲ್ಲಿಯಲ್ಲಿರುವ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಪಶ್ಚಿಮ ಏಶ್ಯದಲ್ಲಿ ಸುಮಾರು 60 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ ಹಾಗೂ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ ವರ್ಷ ಭಾರತಕ್ಕೆ ಸುಮಾರು 63 ಬಿಲಿಯ ಡಾಲರ್ (ಸುಮಾರು 4,05,563 ಕೋಟಿ ರೂಪಾಯಿ) ಹಣ ಕಳುಹಿಸಿದ್ದಾರೆ.

ಅರಬ್ ದೇಶಗಳು ದಿಗ್ಬಂಧನ ವಿಧಿಸದಿದ್ದರೆ ಇಂಧನ ಆಮದಿನ ಮೇಲೆ ತಕ್ಷಣದ ಪರಿಣಾಮ ಇರಲಿಕ್ಕಿಲ್ಲ.

ಮುಖ್ಯವಾಗಿ ಕತರ್‌ನಲ್ಲಿ ಸುಮಾರು 6 ಲಕ್ಷ ಭಾರತೀಯ ಕೆಲಸಗಾರರಿದ್ದಾರೆ. ಅವರಲ್ಲಿ ಹೆಚ್ಚಿನವರು 2022ರ ಫಿಫಾ ವಿಶ್ವಕಪ್‌ಗೆ ಸಂಬಂಧಿಸಿದ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೂ ಅಲ್ಲದೆ, ಕತರ್‌ನೊಂದಿಗೆ ಭಾರತ ಮಹತ್ವದ ವ್ಯಾಪಾರ ಸಂಬಂಧವನ್ನು ಹೊಂದಿದೆ. ಅದು ಭಾರತದ 19ನೆ ಅತಿ ದೊಡ್ಡ ವ್ಯಾಪಾರ ಭಾಗೀದಾರ ದೇಶವಾಗಿದೆ.

ಆದಾಗ್ಯೂ, ಭಾರತ ಸೌದಿ ಅರೇಬಿಯ ಮತ್ತು ಯುಎಇಯೊಂದಿಗೆ ಹೆಚ್ಚಿನ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ಯುಎಇ ಭಾರತದ 3ನೆ ಅತಿ ದೊಡ್ಡ ವ್ಯಾಪಾರ ಭಾಗೀದಾರ ದೇಶವಾದರೆ, ಸೌದಿ ಅರೇಬಿಯ 4ನೆ ಸ್ಥಾನದಲ್ಲಿದೆ.

ಕತರ್ ಏರ್‌ವೇಸ್ ಗತಿಯೇನು?

ಅರಬ್ ದೇಶಗಳು ಕತರ್‌ನೊಂದಿಗೆ ಸಂಬಂಧ ಕಡಿದುಕೊಂಡ ಬೆನ್ನಿಗೇ, ಕತರ್ ಏರ್‌ವೇಸ್ ವಿಮಾನಗಳು ತಮ್ಮ ದೇಶಕ್ಕೆ ಬರುವುದನ್ನು ನಿಷೇಧಿಸಿವೆ. ಇದು ಕೊಲ್ಲಿಯ ಇತರ ಸ್ಥಳಗಳಿಗೆ ಹೋಗಲು ದೋಹಾವನ್ನು ಕೇಂದ್ರವಾಗಿ ಬಳಸುವ ಭಾರತೀಯ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ.

ಪ್ರಸಕ್ತ, ಕತರ್ ಏರ್‌ವೇಸ್ ಭಾರತದಿಂದ ವಾರವೊಂದಕ್ಕೆ ಸುಮಾರು 24,000 ಪ್ರಯಾಣಿಕರನ್ನು ಒಯ್ಯುತ್ತಿದೆ.

ಇತ್ತೀಚೆಗೆ ಭಾರತದಲ್ಲಿ ಆಂತರಿಕ ಹಾರಾಟ ನಡೆಸುವ ತನ್ನದೇ ಆದ ಉಪ ವಿಮಾನ ಸಂಸ್ಥೆಯನ್ನು ಹೊಂದುವ ಯೋಚನೆಯನ್ನು ಕತರ್ ಹೊಂದಿತ್ತು. ಇದಕ್ಕಾಗಿ ಅದು ಮನವಿಯನ್ನೂ ಸಲ್ಲಿಸಿತ್ತು. ಈ ಯೋಜನೆಗಳ ಮೇಲೆ ಹಾಲಿ ಬೆಳವಣಿಗೆಗಳು ಯಾವ ಪರಿಣಾಮ ಬೀರುತ್ತವೆ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ತೈಲ ಬೆಲೆಯಲ್ಲಿ ಏರಿಕೆ
ಮಧ್ಯಪ್ರಾಚ್ಯದ ಬೆಳವಣಿಗೆಯ ಬಳಿಕ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಕತರ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ)ದ ಅತ್ಯಂತ ದೊಡ್ಡ ಉತ್ಪಾದಕ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News