ಜು.1- ದಾವಣಗೆರೆಯಲ್ಲಿ ವಾಲ್ಮೀಕಿ ಸಮಾವೇಶ: ಎಚ್.ಡಿ.ದೇವೇಗೌಡ

Update: 2017-06-05 16:27 GMT

 ಬೆಂಗಳೂರು, ಜೂ.5: ಜೆಡಿಎಸ್ ಪಕ್ಷದಿಂದ ವಾಲ್ಮೀಕಿ ಸಮುದಾಯದ ಬೃಹತ್ ಸಮಾವೇಶವನ್ನು ಜು.1ರಂದು ದಾವಣಗೆರೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಸೋಮವಾರ ನಗರದ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ವಾಲ್ಮೀಕಿ ಸಮಾವೇಶದ ಪೂರ್ವಭಾವಿ ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ವಾಲ್ಮೀಕಿ ಸಮಾವೇಶವನ್ನು ನಾವೂ ಮಾಡಬೇಕು ಎಂದು ಪಕ್ಷದೊಳಗಿನ ಮುಖಂಡರು ಹಲವು ಬಾರಿ ಒತ್ತಾಯ ಮಾಡಿದ್ದರು.ಈ ಕುರಿತು ಮೂರು ಬಾರಿ ಸಭೆಗಳನ್ನು ನಡೆಸಲಾಗಿದೆ. ಇಂದು ನಡೆದ ಸಭೆಯಲ್ಲಿ ಜು.1ರಂದು ದಾವಣಗೆರೆಯಲ್ಲಿ ಬೃಹತ್‌ ವಾಲ್ಮೀಕಿ ಸಮಾವೇಶ ಆಯೋಜನೆಗೆ ತೀರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರನ್ನು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ವಾಲ್ಮೀಕಿ ಸಮಾಜದ ಅಭಿವೃದ್ದಿಗೆ ಜೆಡಿಎಸ್ ಹಲವು ಕೊಡುಗೆಗಳನ್ನು ನೀಡಿದೆ. ಸಮುದಾಯದ ಎಲ್ಲರನ್ನು ಒಂದೇ ವೇದಿಕೆಲ್ಲಿ ಒಂದು ಗೂಡಿಸಲಾಗುವುದು. ಮುಂದಿನ ಚುನಾಚವಣೆಯಲ್ಲಿ ವಾಲ್ಮೀಕಿ ಸಮುದಾಯದ ಜನರು ಜೆಡಿಎಸ್‌ಗೆ ಬೆಂಬಲಿಸಲಿಸುವ ವಿಶ್ವಾಸವಿದೆ ಎಂದರು.

ನೋಟ್ ಬ್ಯಾನ್ ಕಸರತ್ತು ವಿಫಲ:ಪ್ರಧಾನಿ ನರೇಂದ್ರ ಮೋದಿ ನಡೆಸಿದ ಗರಿಷ್ಠ ಮುಖಬೆಲೆಯ ನೋಟುಗಳ ಅಪಮೌಲೀಕರಣದ ಕಸರತ್ತು ಸಂಪೂರ್ಣ ವಿಫಲವಾಗಿದೆ. ಈ ಕ್ರಮದಿಂದ ದೇಶದ ಜಿಡಿಪಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಅಪಮೌಲೀಕರಣ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಕುರಿತು ಕೆಲವೇ ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.

ಸೂಕ್ತ ನಿರ್ಧಾರ:ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಾಯದ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ವರ್ಚ್ಚಸ್ಸಿಗೆ ಧಕ್ಕೆಯಾಗಲ್ಲ:ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುವುದರಿಂದ ಜೆಡಿಎಸ್ ಪಕ್ಷದ ವರ್ಚ್ಚಸ್ಸಿಗೆ ಯಾವುದೇ ತೊಂದರೆಯಾಗುವುದಿಲ್ಲ. ಬಿಸಿರಕ್ತದ ಯುವ ನಾಯಕರು ಮುಂದೆ ಬಂದು ಸ್ವಇಚ್ಛೆಯಿಂದ ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ.ಇದರಿಂದ ಪಕ್ಷ ಇನ್ನಷ್ಟು ಬಲಯುತವಾಗಲಿದೆ ಎಂದರು.

ಪಕ್ಷಕ್ಕೆ ಸೇರ್ಪಡೆ: ಸಚಿವ ದಿ.ಎ.ಕೃಷ್ಣಪ್ಪ ಅವರ ಸಹೋದರ ಕಾಂಗ್ರೆಸ್ ಮುಖಂಡ ಡಿ.ಎ.ಗೋಪಾಲ ಮತ್ತು ಅವರ ಬೆಂಬಲಿಗರನ್ನು ಜೆಡಿಎಸ್ ಪಕ್ಷದ ಶಾಲೂ ಹೊದಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News