ಮೇವಿಲ್ಲದೆ ಜಾನುವಾರುಗಳು ಮೃತಪಟ್ಟಿಲ್ಲ: ಕಾಗೋಡು ತಿಮ್ಮಪ್ಪ
ಬೆಂಗಳೂರು, ಜೂ.5: ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಜಾನುವಾರುಗಳು ಮೇವಿಲ್ಲದೆ ಮೃತಪಟ್ಟಿರುವುದು ವರದಿಯಾಗಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ರಫೀಕ್ ಅಹ್ಮದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಜಾನುವಾರುಗಳು ಮೇವಿಲ್ಲದೆ ಮೃತಪಟ್ಟಿಲ್ಲ. ಅಲ್ಲದೆ, ತುಮಕೂರು ಜಿಲ್ಲೆಯಲ್ಲಿ ತೆರೆದಿರುವ ಗೋಶಾಲೆಗಳಲ್ಲಿ ಹೆಚ್ಚು ವಾಸನೆ ಹಾಗೂ ಧೂಳು ತುಂಬಿಕೊಂಡಿರುವ ಕಳಪೆ ಮೇವನ್ನು ನೀಡಿಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ತೆರೆದಿರುವ ಗೋಶಾಲೆಗಳಲ್ಲಿ ಸ್ಥಳೀಯ ಪಶುವೈದ್ಯರಿಂದ ಮೇವಿನ ಗುಣಮಟ್ಟವನ್ನು ಪರಿಶೀಲಿಸಿ ಕಳಪೆ ಮೇವು ಎಂದು ಕಂಡು ಬಂದ ಮೇವನ್ನು ಸ್ವೀಕರಿಸದೆ ಹಿಂತಿರುಗಿಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಫೀಕ್‌ಅಹ್ಮದ್, ತುಮಕೂರಿನ ಗೋಶಾಲೆಯಲ್ಲಿ ಜಾನುವಾರುಗಳು ಮೃತಪಟ್ಟಿವೆ. ಈಗ ತಾಲೂಕಿನಲ್ಲಿರುವ ಗೋಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಮಳೆಗಾಲ ಪ್ರಾರಂಭವಾಗುವವರೆಗೆ ಗೋಶಾಲೆಗಳನ್ನು ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಗೋಶಾಲೆಗಳಲ್ಲಿ ಜಾನುವಾರುಗಳು ಮೃತಪಟ್ಟಿದ್ದರೆ ಈ ಸಂಬಂಧ ವರದಿ ತರಿಸಿಕೊಂಡು ಪರಿಹಾರ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ರಾಜ್ಯದ ಯಾವ ಭಾಗದಲ್ಲಿಯೂ ಗೋಶಾಲೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ಕಾಗೋಡು ತಿಮ್ಮಪ್ಪ ಹೇಳೀದರು.