ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ
ಬೆಂಗಳೂರು, ಜೂ. 6: ಆರೇಳು ತಿಂಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಇಲ್ಲಿನ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸೋಮವಾರ ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿ ಧರಣಿ ಸ್ಥಳಕ್ಕೆ ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ನ ಮ್ಯಾನೇಜರ್ ಡಾ.ದಿವಾಕರ್ ಆಗಮಿಸಿ ಮನವಿ ಪತ್ರ ಸ್ವೀಕರಿಸಿ, ಆಶಾ ಕಾರ್ಯಕರ್ತೆಯರು ಹಾಗೂ ಸಂಘಟನಾಕಾರರೊಂದಿಗೆ ಮಾತುಕತೆ ನಡೆಸಿ, ತಮ್ಮ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷೆ ಟಿ.ಸಿ.ರಮಾ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆ ನೀಡುತ್ತಿರುವ ಬಿಡಿಗಾಸಿನಲ್ಲಿ ಬೆಂಗಳೂರಿನಂತಹ ನಗರದಲ್ಲಿ ಜೀವನ ಮಾಡುವುದು ಅಸಾಧ್ಯ. ಆದುದರಿಂದ ಈ ಶ್ರಮಜೀಗಳಿಗೆ ಕನಿಷ್ಟ ಮಾಸಿಕ ವೇತನ ನಿಗದಿ ಮಾಡುವುದು ಇಲಾಖೆಯ ಕನಿಷ್ಟ ಜವಾಬ್ದಾರಿ ಎಂದು ಆಗ್ರಹಿಸಿದರು.
ಪ್ರಸ್ತುತ ನೀಡಲಾಗುತ್ತಿರುವ ಅಲ್ಪ-ಸ್ವಲ್ಪ ಪ್ರೋತ್ಸಾಹ ಅವರಿಗೆ ಸಮಯಕ್ಕೆ ಸರಿಯಾಗಿ ತಲುಪುತಿಲ್ಲ. ಆಶಾಗಳ ಕೆಲಸಕ್ಕೆ ತಕ್ಕ ಪ್ರೋತ್ಸಾಹ ಆಶಾಗಳಿಗೆ ತಲುಪದಿರಲು ಆರೋಗ್ಯ ಇಲಾಖೆಯಲ್ಲಿನ ಲೋಪದ ನಂತರ ಇನ್ನೊಂದು ಮುಖ್ಯ ತೊಡಕು ಎಂದರೆ ’ಆಶಾ ಸಾಫ್ಟ್’ ಮಾದರಿಯಲ್ಲಿರುವ ಕುಂದು-ಕೊರತೆಗಳು. ಇಂತಹ ಪರಿಸ್ಥಿತಿಯಿಂದಾಗಿ ಈಗಾಗಲೇ ಸಾಕಷ್ಟು ಕಾರ್ಯಕರ್ತೆಯರು ಈ ಕೆಲಸವನ್ನೇ ತೊರೆದು ಹೋಗಿದ್ದಾರೆ.ಜೊತೆಗೆ ಇತ್ತೀಚೆಗೆ ನಡೆದ ಹಳೆ ನೋಟ್ಗಳ ರದ್ದತಿ ನಂತರ ಎಲ್ಲ್ಲ ಆಶಾಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಎಸ್ಬಿಐ ಬ್ಯಾಂಕ್ನಲ್ಲೇ ತೆರೆಯಬೇಕೆಂದು ನಿರ್ದೇಶಿಸಿದ್ದಾರೆ. ಆದರೆ ಬ್ಯಾಂಕ್ನವರು ಖಾತೆಯಲ್ಲಿ ಕನಿಷ್ಟ 5 ಸಾವಿರ ರೂ.ಗಳನ್ನು ಡೆಪಾಸಿಟ್ ಮಾಡುವುದು ಕಡ್ಡಾಯ ಎನ್ನುತ್ತಿದ್ದಾರೆ. ಇದರಿಂದಾಗಿ ಬರಿಗೈಯಲ್ಲಿರುವ ಬಡ ಆಶಾ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದುದರಿಂದ ಶೂನ್ಯ ಮೊತ್ತದಲ್ಲಿ ಬ್ಯಾಂಕ್ ಖಾತೆ ತೆರೆಯಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಶಾಗಳಿಗೆ ಬರುವ ಬಿಡಿಗಾಸು ಸಾರಿಗೆ ವೆಚ್ಚ ಕಳೆದರೆ ಉಳಿಯುವುದೇನು? ಆದುದರಿಂದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಉಚಿತ ಬಸ್ಪಾಸ್ ವಿತರಿಸಬೇಕು. ಆರೋಗ್ಯ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.