ಸಮುದ್ರ ಮೂಲಕ ಕತರ್‌ಗೆ ಆಹಾರ ರಫ್ತು ಮಾಡಲು ಇರಾನ್ ಮುಂದು

Update: 2017-06-06 13:55 GMT

ದೋಹಾ, ಜೂ. 6: ತನ್ನ ದೇಶವು ಕತರ್‌ಗೆ ಸಮುದ್ರದ ಮೂಲಕ ಅಹಾರವನ್ನು ರಫ್ತು ಮಾಡಬಹುದಾಗಿದೆ ಎಂದು ಇರಾನ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇರಾನ್‌ನಿಂದ ಕಳುಹಿಸುವ ಆಹಾರ ಸರಕುಗಳು ಕತರನ್ನು 12 ಗಂಟೆಗಳಲ್ಲಿ ತಲುಪುತ್ತವೆ ಎಂದು ಕೃಷಿ ಉತ್ಪನ್ನಗಳ ರಫ್ತುದಾರರ ಒಕ್ಕೂಟದ ಅಧ್ಯಕ್ಷ ರೆಝ ನೂರಾನಿ ಹೇಳಿದ್ದಾರೆ ಎಂದು ಅರೆ ಸರಕಾರಿ ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕತರ್ ತನ್ನ ಏಕೈಕ ಭೂಗಡಿಯನ್ನು ಸೌದಿ ಅರೇಬಿಯದೊಂದಿಗೆ ಹೊಂದಿದೆ ಹಾಗೂ ತನ್ನ ಹೆಚ್ಚಿನ ಆಹಾರ ಧಾನ್ಯಗಳನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳು ಕೊಲ್ಲಿ ದೇಶಗಳಿಂದಲೇ ಆಮದಾಗುತ್ತಿವೆ.

ಕತರ್‌ಗೆ ಆಹಾರ ಧಾನ್ಯಗಳನ್ನು ಒಯ್ಯುತ್ತಿರುವ ಟ್ರಕ್‌ಗಳು ಗಡಿಯಲ್ಲಿ ಸಾಲುಗಟ್ಟಿವೆ ಎಂದು ಅಲ್-ಜಝೀರ ವರದಿ ಮಾಡಿದೆ.

ಇರಾನ್ ಮತ್ತು ಸೌದಿ ಅರೇಬಿಯ ಪ್ರಾದೇಶಿಕ ವೈರಿಗಳಾಗಿದ್ದು, ಸಿರಿಯ ಮತ್ತು ಯಮನ್‌ಗಳಲ್ಲಿ ಅವುಗಳು ಪರಸ್ಪರ ವಿರೋಧಿ ಬಣಗಳನ್ನು ಬೆಂಬಲಿಸುತ್ತಿವೆ.

ಸೌದಿ ಅರೇಬಿಯವು ವಸ್ತುಶಃ ಅಹಾರ ತಡೆಯನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಅಧಿಕಾರಿಗಳು ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News