ತಾಲೂಕು ಆಸ್ಪತ್ರೆಗಳಲ್ಲಿ ಒಂದೂವರೆ ತಿಂಗಳಲ್ಲಿ ಡಯಾಲಿಸಿಸ್ ಕೇಂದ್ರ: ಸಚಿವ ರಮೇಶ್ ಕುಮಾರ್

Update: 2017-06-08 13:13 GMT

ಬೆಂಗಳೂರು, ಜೂ. 8: ರಾಜ್ಯದ 146 ತಾಲೂಕು ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್, ಡಿಜಿಟನ್ ಎಕ್ಸ್‌ರೆ, ಕ್ಯಾಟೀನ್, ಜನರಿಕ್ ಔಷಧಿ ಮಳಿಗೆ, ಹಾಸಿಗೆ ಹೆಚ್ಚಳ, ಆಧುನಿಕ ರಕ್ತ ನಿಧಿ ಕೇಂದ್ರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಇನ್ನು ಒಂದೂವರೆ ತಿಂಗಳಲ್ಲಿ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಡ ರೋಗಿಗಳ ಯಾವುದೇ ಕಾರಣಕ್ಕೂ ಡಯಾಲಿಸಿಸ್, ರಕ್ತ ನಿಧಿ ಸೇರಿದಂತೆ ಯಾವುದೇ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿಯೂ ಸಿಟಿ ಸ್ಕಾನ್, ಎಂಆರ್‌ಐ ಸ್ಕಾನಿಂಗ್ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಮೂರು ಹಾಸಿಗೆಗಳ ಐಸಿಯು ಘಟಕ ಸೇರಿದಂತೆ ಎಲ್ಲ ಸೌಲಭ್ಯಗಳುಳ್ಳ ಆಧುನಿಕ ವ್ಯವಸ್ಥೆಯನ್ನು ಇನ್ನು ಒಂದೂವರೆ ತಿಂಗಳಲ್ಲಿ ಕಲ್ಪಿಸಲಾಗುವುದು ಎಂದು ರಮೇಶ್ ಕುಮಾರ್ ವಿವರ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಎಲ್ಲಿಯೂ ವೈದ್ಯರ ಕೊರತೆ ಸೃಷ್ಟಿಯಾಗದಂತೆ ಕ್ರಮ ವಹಿಸಲಾಗುವುದು ಎಂದ ಅವರು, ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು ಎಂದರು.

ಆಸ್ಪತ್ರೆಗಳು ಮೇಲ್ದರ್ಜೆಗೆ: ಒಳ ರೋಗಿಗಳ ಸಂಖ್ಯೆಯನ್ನು ಆಧರಿಸಿ ಎಲ್ಲ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅವಕಾಶವಿದ್ದು, ಐವತ್ತರಿಂದ ನೂರು ಮತ್ತು ನೂರರಿಂದ ನೂರೈವತ್ತು ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಕೆಲ ತಾಲೂಕುಗಳಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳ ನೆರವಿಗೆ ಉಚಿತ ಸಂಚಾರ ವ್ಯವಸ್ಥೆಗೆ ವಾಹನ ವ್ಯವಸ್ಥೆ ಕಲ್ಪಿಸಿ, ಆ ಬಳಿಕ ಅವರಿಂದ ಹಣ ವಸೂಲಿ ಮಾಡಿದ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿವೆ ಎಂದ ಅವರು, ಮಂಗಳೂರಿನ ವೆನ್‌ಲಾಕ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಗೆ ಹೆಚ್ಚಾಗಿ ರೋಗಿಗಳ ಬರುತ್ತಿದ್ದಾರೆ ಎಂದರು.

ವಿಶಾಲ ಹೃದಯವುಳ್ಳ ಹಲವು ಶಾಸಕರು ವಿಶೇಷ ಆಸಕ್ತ ವಹಿಸಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಮತ್ತು ಐಸಿಯು ಘಟಕ ಸ್ಥಾಪನೆಗೆ ಶಾಸಕರ ನಿಧಿಯಿಂದ ಅನುದಾನ ನೀಡಿದ್ದಾರೆ. ಇನ್ನು ಕೆಲವರಿಗೆ ಪುರುಸೊತ್ತಲ್ಲ. ಎಲ್ಲರೂ ಅನುದಾನ ಒದಗಿಸಿದರೆ ಬಡವರಿಗೆ ಅನುಕೂಲ ಕಲ್ಪಿಸಲಾಗುವುದು’

-ಕೆ.ಆರ್.ರಮೇಶ್ ಕುಮಾರ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News