ಪ್ಲಾಸ್ಟಿಕ್ ಮೊಟ್ಟೆ, ಅಕ್ಕಿ, ಸಕ್ಕರೆ ವಿಧಾನಸಭೆಯಲ್ಲಿ ಪ್ರತಿಧ್ವನಿ
ಬೆಂಗಳೂರು, ಜೂ. 9: ಪ್ಲಾಸ್ಟಿಕ್ ಮೊಟ್ಟೆ, ಅಕ್ಕಿ, ಸಕ್ಕರೆ ಪೂರೈಕೆಯಾಗುತ್ತಿದೆ ಎಂಬ ವಿಷಯ ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಅಲ್ಲದೆ, ಸಾರ್ವಜನಿಕರಲ್ಲಿ ಸೃಷ್ಟಿಯಾಗಿರುವ ಆತಂಕದ ಬಗ್ಗೆ ಸದನದಲ್ಲಿ ಕೆಲಕಾಲ ಗಂಭೀರ ಸ್ವರೂಪದ ಚರ್ಚೆಗೂ ಎಡೆಮಾಡಿಕೊಟ್ಟಿತು.
ಶುಕ್ರವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಷಯ ಪ್ರಸ್ತಾಪಿಸಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ, ಸಕ್ಕರೆ ಪತ್ತೆಯಾಗಿರುವ ಸಂಬಂಧ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಈ ಬಗ್ಗೆ ಜನಸಾಮಾನ್ಯರಲ್ಲಿ ಸೃಷ್ಟಿಯಾಗಿರುವ ಆತಂಕ, ಗೊಂದಲಗಳನ್ನು ನಿವಾರಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸೂಕ್ತ ಪರಿಶೀಲನೆ ನಡೆಸಿ, ವರದಿ ಪಡೆಯಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಷ ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಸಿ.ಟಿ. ರವಿ, ಕೊಪ್ಪಳ ಜಿಲ್ಲೆ ಶ್ರೀರಾಮಪುರ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಸರಕಾರ ಪೂರೈಕೆ ಮಾಡಿದ ಅಕ್ಕಿ ಪ್ಲಾಸ್ಟಿಕ್ ಎಂಬ ಅಭಿಪ್ರಾಯವಿದೆ. ಈ ಬಗ್ಗೆ ಸರಕಾರ ಸ್ಪಷ್ಟಣೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪೂರೈಕೆ ಅಸಾಧ್ಯ. ಆಹಾರ ನಿಗಮದಿಂದ ಅಕ್ಕಿ ಪೂರೈಕೆ ಆಗುತ್ತಿದೆ. ಒಂದು ವೇಳೆ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಇದ್ದರೆ ತೋರಿಸಬೇಕು. ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದು, ಅಸಲಿ ಅಕ್ಕಿ ಕೈಯಲ್ಲಿ ಹಿಡಿದರೂ ಅದು ಪ್ಲಾಸ್ಟಿಕ್ ಎಂಬ ಮನಸ್ಥಿತಿ ಬಂದಿದೆ ಎಂದರು.