ರಾಜ್ಯ ಸರಕಾರಕ್ಕೆ ಶೆಟ್ಟರ್ ತರಾಟೆ
ಬೆಂಗಳೂರು, ಜೂ. 9: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳೆಹಾನಿಗೆ ರಾಜ್ಯ ಸರಕಾರ 1 ರೂ.ಪರಿಹಾರ ಧನವನ್ನು ರೈತರ ಖಾತೆಗಳಿಗೆ ಜಮಾ ಮಾಡುತ್ತಿದ್ದು, ರೈತರೇನು ಭಿಕ್ಷುಕರೇ, ಇತ್ತೀಚಿನ ದಿನಗಳಲ್ಲಿ ಭಿಕ್ಷುಕರು 1ರೂ. ಪಡೆಯುವುದಿಲ್ಲವೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಂದಾಯ ಇಲಾಖೆ ರೈತರ ಖಾತೆಗಳಿಗೆ 1 ರೂ.ಹಣವನ್ನು ಜಮಾ ಮಾಡುವ ಮೂಲಕ ರೈತರಿಗೆ ಅಪಮಾನ ಮಾಡುತ್ತಿದೆ. ಸರಕಾರದ ಬಳಿ ಹಣವಿಲ್ಲವೆಂದರೆ ರೈತರೆ ನಿಮಗೆ 10ರೂ. ನೀಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಹಾನಿಗೆ ರೈತರ ಖಾತೆಗೆ 1 ರೂ.ಜಮಾ ಮಾಡುತ್ತಿರುವ ಬಗ್ಗೆ ಧಾರವಾಡ, ಹಾಸನ ಸೇರಿ ವಿವಿಧ ಜಿಲ್ಲೆಗಳಿಂದ ತನಗೆ ಮಾಹಿತಿ ಬಂದಿದ್ದು, ರಾಜ್ಯ ಸರಕಾರಕ್ಕೆ ನಾಚಿಕೆಯಾಗಬೇಕು. ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ತಪ್ಪನ್ನು ಸರಿಪಡಿಸಿ ಬೆಳೆಹಾನಿಗೆ ಸಮರ್ಪಕ ಪರಿಹಾರ ವಿತರಣೆ ಮಾಡಿ ಎಂದು ಅವರು ಕೋರಿದರು.
ವಿಪಕ್ಷ ನಾಯಕರ ಪ್ರಸ್ತಾಪಕ್ಕೆ ಉತ್ತರಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಬರ ಸ್ಥಿತಿ ಹಿನ್ನೆಲೆಯಲ್ಲಿ ಬೆಳೆಹಾನಿಗೆ ಕಂದಾಯ ಇಲಾಖೆ ರೈತರ ಖಾತೆಗೆ 1 ರೂ.ಜಮಾ ಮಾಡಿರುವುದನ್ನು ಕೇಳಿದರೆ ಆಶ್ಚರ್ಯ ಆಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.