ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಶಾಸಕರಿಗೆ ಸಂಧಿ, ಸಮಾಸ, ವ್ಯಾಕರಣ ಪಾಠ
ಬೆಂಗಳೂರು, ಜೂ. 9: 'ಸಂಧಿ, ಸಮಾಸ, ವ್ಯಾಕರಣ ಅಂದ್ರೆನೂ ಅಂತ ಗೊತ್ತೇನ್ರಿ ನಿಮಗೆ. ಸಂಧಿನೇ ಗೊತ್ತಿಲ್ಲ ಅಂದ್ರೆ ಶಿಕ್ಷಣದ ಬಗ್ಗೆ ಇಲ್ಲಿ ನೀವೇನ್ ಮಾತನಾಡ್ತೀರಿ...' ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ಸದಸ್ಯರನ್ನು ಛೇಡಿಸಿದ ಪ್ರಸಂಗ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು.
ಶುಕ್ರವಾರ ವಿಧಾನಸಭೆಯಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳ ಮೇಲೆ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ. ಸರಕಾರಿ ಶಾಲೆಗಳಿಗೆ ಕೋಟ್ಯಂತರ ರೂ.ವೆಚ್ಚ ಮಾಡುತ್ತಿದ್ದು, ಆದರೆ, ಮಕ್ಕಳು ಬರುತ್ತಿಲ್ಲ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಈ ವೇಳೆ ಸದನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರಕಾರಿ ಶಾಲೆಯಲ್ಲಿ ಓದಿದ್ದರಿಂದಲೇ ತಾನು ವಿಧಾನಸಭೆಗೆ ಆರಿಸಿ ಬಂದಿದ್ದೇನೆ. ಇಲ್ಲಿರುವ ಬಹುತೇಕ ಸದಸ್ಯರೆಲ್ಲರೂ ಸರಕಾರಿ ಶಾಲೆಗಳಲ್ಲಿ ಓದಿದವರೇ ಆಯ್ಕೆಯಾಗಿ ಬಂದಿದ್ದಾರೆ ಎಂದು ಸರಕಾರಿ ಶಾಲೆಗಳನ್ನು ಸಮರ್ಥಿಸಿಕೊಂಡರು.
ಇದೀಗ ಎಲ್ಲರಿಗೂ ಇಂಗ್ಲಿಷ್ ಕಲಿಸಬೇಕು ಎಂದು ಹೇಳುತ್ತಾರೆ. ಆದರೆ, ಈಗಾಗಲೆ ಕನ್ನಡ ಮರೆತು ಹೋಗುತ್ತಿದ್ದಾರೆ. ಈಗಿನ ವಿದ್ಯಾರ್ಥಿಗಳಿಗೆ ವ್ಯಾಕರಣ, ಸಂಧಿ, ಸಮಾಸ ಏನೂ ಅಂತನೇ ಗೊತ್ತಿಲ್ಲ. ಸ್ವರ, ವ್ಯಂಜನ ಸೇರಿದಂತೆ ವ್ಯಾಕರಣಬದ್ಧ ಭಾಷೆ ಕಲಿಕೆ ಮುಖ್ಯ ಎಂದು ಸಿದ್ಧರಾಮಯ್ಯ ಪ್ರತಿಪಾದಿಸಿದರು.
ಬಿಜೆಪಿ ಸದಸ್ಯ ಡಾ.ಅಶ್ವಥ್ ನಾರಾಯಣ ಅವರನ್ನು ಕುರಿತು 'ನೀವು ಎಂಬಿಬಿಎಸ್ ಕಲಿತ್ತಿದ್ದೀರಿ, ನಿಮಗೆ ಸಂಧಿ, ಸಮಾಸ, ಸ್ವರ, ವ್ಯಂಜನ ಗೊತ್ತಿದ್ದರೆ ಹೇಳಿ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಅಲ್ಲದೆ, 'ಇದೆಲ್ಲ ನಿಮಗೆ ಗೊತ್ತಾಗುವುದಿಲ್ಲ ಬಿಡಿ' ಎಂದು ಕಾಲೆಳೆದರು.
'ತಾನು ಐದನೆ ತರಗತಿಯಲ್ಲಿರುವ ವೇಳೆ ಪುಟ್ಟಪ್ಪ ಎಂಬ ನನ್ನ ಸ್ನೇಹಿತನಿದ್ದ. ಶಿಕ್ಷಕರು ವೌಕಿಕ ಪರೀಕ್ಷೆಯಲ್ಲಿ ಆತನಿಗೆ ಸಂಧಿ ಎಂದರೇನು ಎಂದು ಪ್ರಶ್ನಿಸಿದರು. ಅದಕ್ಕೆ ಆತ 'ನಮ್ಮ ಮನೆಗೂ ನಮ್ಮ ದೊಡ್ಡಪ್ಪನ ಮನೆಗೂ ನಡುವೆ ಇರುವ ಓಣಿಯೇ ಸಂಧಿ ಎಂದು ಉತ್ತರ ಕೊಟ್ಟಿದ್ದ. ಹೀಗೆ ಉತ್ತರ ನೀಡಿದ ಪುಟ್ಟಪ್ಪನಿಗೆ ಶಿಕ್ಷಕರು ಐದನೆ ತರಗತಿಯಲ್ಲಿ ಇನ್ನೊಂದು ವರ್ಷ ಇರು ಎಂದು ಅನುತ್ತೀರ್ಣ ಮಾಡಿದ್ದರು ಎಂದಾಗ ಇಡೀ ಸದನದ ಸದಸ್ಯರನ್ನು ನಗೆ ಅಲೆಯಲ್ಲಿ ತೇಲಿಸಿತು.
ಅಕ್ಷರಗಳು ಸೇರುವುದೇ ಸಂಧಿ: ಅಕ್ಷರಗಳು ಎಡಬಿಡದೆ ಒಂದಕ್ಕೊಂದು ಸೇರುವುದೇ 'ಸಂಧಿ' ಎಂದು ಸಿದ್ಧರಾಮಯ್ಯ ವಿವರಣೆ ನೀಡಿದರು. ಅಲ್ಲದೆ, ಸಂಧಿಗಳಲ್ಲಿ ಎಷ್ಟು ವಿಧ ಎಂದು ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನಾರಾಯಣಸ್ವಾಮಿ, ಗುಣ ಸಂಧಿ, ಸವರ್ಣಧೀರ್ಘ ಸಂಧಿ ಎಂದು ತಮಗೆ ತಿಳಿದದ್ದನ್ನು ಹೇಳಿದರು. ಅದನ್ನು ತಿದ್ದಿದ ಸಿದ್ಧರಾಮಯ್ಯ, ಸಂಧಿಗಳಲ್ಲಿ ಮೂರು ವಿಧ. ಆಗಮ ಸಂಧಿ, ಲೋಪ ಸಂಧಿ, ಆದೇಶ ಸಂಧಿ, ವ್ಯಂಜನ ಸಂಧಿಗಳಲ್ಲಿ ಎಷ್ಟು ವಿಧ ಹೇಳಿ ಎಂದು ಮತ್ತೆ ಬಿಜೆಪಿ ಸದಸ್ಯರನ್ನು ಕೆಣಕಿದರು.
ಇತ್ತೀಚಿನ ದಿನಗಳಲ್ಲಿ ವ್ಯಾಕರಣ, ಸಂಧಿ, ಸಮಾಸದ ಬಗ್ಗೆ ಯಾರಿಗೂ ಗೊತ್ತಿಲ್ಲ. ತಾನು ಓದುವ ವೇಳೆ ಶಿಕ್ಷಕರು ಹೊಡೆದು ಪಾಠ ಕಲಿಸುತ್ತಿದ್ದರು. 1956ರಲ್ಲಿ ತಾನು ಕಲಿತದ್ದು ಇಂದಿಗೂ ಜ್ಞಾಪಕವಿದೆ ಎಂದು ಸಿದ್ಧರಾಮಯ್ಯ ಹೇಳಿದರು.
ಇತ್ತೀಚಿನ ದಿನಗಳಲ್ಲಿ ವ್ಯಾಕರಣ, ಸಂಧಿ, ಸಮಾಸದ ಬಗ್ಗೆ ಯಾರಿಗೂ ಗೊತ್ತಿಲ್ಲ. ತಾನು ಓದುವ ವೇಳೆ ಶಿಕ್ಷಕರು ಹೊಡೆದು ಪಾಠ ಕಲಿಸುತ್ತಿದ್ದರು. 1956ರಲ್ಲಿ ತಾನು ಕಲಿತದ್ದು ಇಂದಿಗೂ ಜ್ಞಾಪಕವಿದೆ ಎಂದು ಸಿದ್ಧರಾಮಯ್ಯ ಹೇಳಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್. ಪುಟ್ಟಣ್ಣಯ್ಯ, 'ನೀವು ಎಲ್ಲ ಸಂಧಿಗಳನ್ನು ನುಗ್ಗಿದ್ದರಿಂದಲೇ ಮುಖ್ಯಮಂತ್ರಿ ಆಗಿದ್ದೀರಿ ಎಂದು ಕಾಲೆಳೆದರು. 'ಪುಟ್ಟಣ್ಣಯ್ಯ ನೀವೂ ಸಂಧಿಗಳನ್ನು ಹುಡುಕಿ, ಮುಖ್ಯಮಂತ್ರಿ ಆಗಬಹುದು ಎಂದು ಹಾಸ್ಯದ ದಾಟಿಯಲ್ಲೆ ಸಲಹೆ ನೀಡಿದರು.
ಅದೆಲ್ಲ ನಮಗೆ ಆಗುವುದಿಲ್ಲ ಸಾರ್..ನಾವು ರೈತರ ಸಂಧಿಯಲ್ಲಿ ಸಿಲುಕಿದ್ದು, ನುಸುಳಿ ಹೊರಬರಲು ಆಗುತ್ತಿಲ್ಲ. ಇನ್ನು ಮುಖ್ಯಮಂತ್ರಿ ಆಗುವ ಮಾತು ಎಲ್ಲಿಯದ್ದು ಎಂದು ಪುಟ್ಟಣ್ಣಯ್ಯ ಪ್ರತಿಕ್ರಿಯೆ ನೀಡಿದರು. ಸಚಿವ ರಮೇಶ್ ಕುಮಾರ್, 'ನೀವು ಮಾತನಾಡುವ ಭಾಷೆ ಸರಿಯಾಗಿಲ್ಲ. ಆವೇಶದಲ್ಲಿ ಬಳಸುವ ಮಾತುಗಳೆ ಕನ್ನಡದ ನಿಜವಾದ ಭಾಷೆ' ಎಂದು ಮಸಾಲೆ ಬೆರೆಸಿದರು. ಇದರಿಂದ ಇಡೀ ಸದನ ಕೆಲಕಾಲ ಸ್ವಾರಸ್ಯಕರ ಚರ್ಚೆಯಿಂದ ನಗೆ ಅಲೆಯಲ್ಲಿ ಮಿಂದೆದ್ದಿತು.
'ಕನ್ನಡ ಶಾಲೆಗಳ ಬಗ್ಗೆ ಭಾಷಣ ಮಾಡುವುದನ್ನು ಬಿಟ್ಟು ಮೊದಲು ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ, ಇತರರಿಗೆ ಮಾದರಿಯಾಗಬೇಕು. ನಮ್ಮ ಮಕ್ಕಳು ಇಂಗ್ಲಿಷ್ ಕಲಿಯಬೇಕು, ಇತರ ಮಕ್ಕಳು ಸರಕಾರಿ ಶಾಲೆಯಲ್ಲಿ ಓದಲಿ ಎಂಬ ಧೋರಣೆ ಸರಿಯಲ್ಲ. ಸರಕಾರಿ ಶಾಲೆಗಳಲ್ಲೆ ರಾಜ್ಯದ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದಾರೆ'
-ಸಿದ್ಧರಾಮಯ್ಯ ಮುಖ್ಯಮಂತ್ರಿ